ಡರ್ಹಮ್: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಪೂರ್ವಭಾಗಿಯಾಗಿ ಡರ್ಹಮ್ ವಿರುದ್ಧ ನಡೆಯುತ್ತಿರುವ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್, ಕನ್ನಡಿಗ ಕೆ.ಎಲ್ ರಾಹುಲ್ ಶತಕ ಸಿಡಿಸುವ ಮೂಲಕ ತಾವೂ ಟೆಸ್ಟ್ ಸರಣಿಗೆ ಪ್ರಬಲ ಆಕಾಂಕ್ಷಿ ಎಂದು ಸಾಬೀತು ಪಡಿಸಿದ್ದಾರೆ.
ಕೊಹ್ಲಿ ಮತ್ತು ರಹಾನೆ ಅನುಪಸ್ಥಿತಿಯಲ್ಲಿ ರೋಹಿತ್ ನೇತೃತ್ವದಲ್ಲಿ ಕಣಕ್ಕಿಳಿದಿರುವ ಭಾರತ ತಂಡ ಕೇವಲ 67 ರನ್ಗಳಾಗುವಷ್ಟರಲ್ಲಿ ರೋಹಿತ್(9), ಮಯಾಂಕ್ ಅಗರ್ವಾಲ್(28), ಚೇತೇಶ್ವರ್ ಪೂಜಾರ(21) ವಿಕೆಟ್ ಕಳೆದುಕೊಂಡಿತು.
5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಹುಲ್ ಹನುಮ ವಿಹಾರಿ ಜೊತೆಗೂಡಿ 4ನೇ ವಿಕೆಟ್ಗೆ 40 ರನ್ ಸೇರಿಸಿದರು. 24 ರನ್ಗಳಿಸಿದ್ದ ವಿಹಾರಿ ಪ್ಯಾಟರ್ಸನ್ ವೇಟ್ಗೆ ವಿಕೆಟ್ ಒಪ್ಪಿಸಿದರು.
127ರನ್ ಗಳ ಜೊತೆಯಾಟ
107ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ಜಡೇಜಾ ಮತ್ತು ರಾಹುಲ್ 5ನೇ ವಿಕೆಟ್ ಜೊತೆಯಾಟದಲ್ಲಿ 127 ರನ್ಗಳ ಜೊತೆಯಾಟ ನೀಡಿದರು. 150 ಎಸೆತಗಳನ್ನು ಎದುರಿಸಿದ ರಾಹುಲ್ 11 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 101 ರನ್ಗಳಿಸಿ ಬೇರೆ ಆಟಗಾರರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡುವ ಸಲುವಾಗಿ ನಿವೃತ್ತಿ ತೆಗೆದುಕೊಂಡರು.
ರಾಹುಲ್ಗೆ ಸಾಥ್ ನೀಡಿದ ಜಡೇಜಾ 132 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 74 ರನ್ಗಳಿಸಿ ಇನ್ನು ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶಾರ್ದುಲ್ ಠಾಕೂರ್ 16 ರನ್ಗಳಿಸಿದ್ದಾರೆ.
ಇದನ್ನೂ ಓದಿ : ಒತ್ತಡ ಬಿಟ್ಟು ಆಟ ಆನಂದಿಸಿ, ಪದಕ ಗೆದ್ದು ಕನಸು ನನಸಾಗಿಸಿ: ಸಚಿನ್ ಸಂದೇಶ