ದುಬೈ: 2021ರ ಐಪಿಎಲ್ ಆವೃತ್ತಿ ಮುಗಿಯುವ ಮುನ್ನವೇ ಮುಂದಿನ ವರ್ಷದ ಮೆಗಾ ಹರಾಜಿನ ಬಗ್ಗೆ ಫ್ರಾಂಚೈಸಿಗಳು ತಲೆಕೆಡಿಸಿಕೊಳ್ಳಲು ಶುರುಮಾಡಿವೆ.
ಬಿಸಿಸಿಐ ಆಟಗಾರರ ರೀಟೈನ್ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದ್ದರಿಂದ ಫ್ರಾಂಚೈಸಿಗಳು ಹೊಸ ತಂಡಗಳನ್ನು ಕಟ್ಟುವುದಕ್ಕೆ ಮುಂದಾಗುತ್ತಿವೆ. ಅದರಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಲವು ಫ್ರಾಂಚೈಸಿಗಳು ಪ್ರಯತ್ನಿಸುತ್ತಿವೆ ಎಂದು ವರದಿಗಳಿಂದ ತಿಳಿದುಬಂದಿದೆ.
ಕೆ.ಎಲ್.ರಾಹುಲ್ 2018ರಿಂದಲೂ ಪಂಜಾಬ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ದುರಾದೃಷ್ಟವಶಾತ್ ಅವರ ತಂಡ ಪಂದ್ಯಗಳಲ್ಲಿ ಸಮತೋಲನ ಕಾಪಾಡಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ಕಳೆದ ಎರಡೂ ವರ್ಷಗಳಿಂದ ರಾಹುಲ್ ಹಾಗೂ ಮತ್ತೊಬ್ಬ ಕನ್ನಡಿಗ ಮಯಾಂಕ್ ಹೊರತುಪಡಿಸಿದರೆ ತಂಡದಲ್ಲಿ ಉಳಿದ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ ಕಂಡುಬರುತ್ತಿಲ್ಲ. ಬ್ಯಾಟರ್ ಆಗಿ ಯಶಸ್ವಿಯಾಗಿರುವ ರಾಹುಲ್, ಒಬ್ಬ ನಾಯಕನಾಗಿ ಪಂಜಾಬ್ ತಂಡದಲ್ಲಿ ತೃಪ್ತಿಯಿಂದಿಲ್ಲ. ಹಾಗಾಗಿ ಈ ಬಾರಿ ಅವರೂ ಪಂಜಾಬ್ ತಂಡದಿಂದ ಹೊರಬಂದು ಬೇರೆ ಫ್ರಾಂಚೈಸಿಯಲ್ಲಿ ಆಡಬಹುದು ಎನ್ನಲಾಗುತ್ತಿದೆ.
ಈ ಊಹಾಪೋಹಕ್ಕೆ ಕಾರಣವೇನು?
ಮುಂಬರುವ ಟಿ20 ವಿಶ್ವಕಪ್ ನಂತರ ಭಾರತ ತಂಡದ ಟಿ20 ನಾಯಕತ್ವವನ್ನು ತ್ಯಜಿಸುವುದಾಗಿ ಈಗಾಗಲೇ ವಿರಾಟ್ ಕೊಹ್ಲಿ ಘೋಷಣೆ ಮಾಡಿದ್ದಾರೆ. ಉಪನಾಯಕನಾಗಿರುವ ರೋಹಿತ್ ಶರ್ಮಾ ಭಾರತದ ಮುಂದಿನ ನಾಯಕನಾಗಬೇಕೆಂದು ಎಂದು ಈಗಾಗಲೇ ಕೆಲವು ಕ್ರಿಕೆಟ್ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ ರೋಹಿತ್ಗೆ 34 ವರ್ಷಗಳಾಗಿದ್ದು, ಪದೇ ಪದೇ ನಾಯಕತ್ವ ಬದಲಾಯಿಸುವುದು ಬೇಡ ಎಂದು ಬಿಸಿಸಿಐ ಬಯಸಿದರೆ, ಆ ಸ್ಥಾನ ರಾಹುಲ್ಗೂ ಸಿಗಬಹುದು. ಅಥವಾ ರೋಹಿತ್ ನಂತರ ಮುಂದಿನ ಒಂದೆರಡು ವರ್ಷಗಳಲ್ಲಿ ಭಾರತದ ನಾಯಕನಾಗುವ ಅವಕಾಶ ಕೂಡ ಇದೆ.
ರಾಹುಲ್ ಕೂಡ ಭಾರತ ತಂಡದ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದರೆ ಖಂಡಿತಾ ಅವರು ಪಂಜಾಬ್ನಂತಹ ನತದೃಷ್ಟ ತಂಡದಲ್ಲಿರಲು ಬಯಸುವುದಿಲ್ಲ. ಹಾಗಾಗಿ ಮುಂಬರುವ ಮೆಗಾ ಹರಾಜಿನಲ್ಲಿ ಕಣಕ್ಕಿಳಿದು ಭವಿಷ್ಯದ ಭಾರತದ ನಾಯಕನಾಗಲು ಭದ್ರ ಬುನಾದಿ ಹಾಕಿಕೊಳ್ಳಲು ಚಿಂತನೆ ಮಾಡಬಹುದು. ಅಲ್ಲದೆ ರಾಹುಲ್ ಪ್ರಸ್ತುತ 11 ಕೋಟಿ ರೂ ಪಡೆಯುತ್ತಿದ್ದಾರೆ. ಈಗಿನ ಅವರ ಫಾರ್ಮ್ ಗಮನದಲ್ಲಿಟ್ಟು ನೋಡುವುದಾದರೆ ಅವರು ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಹಣಕ್ಕೆ ಮಾರಾಟವಾಗುವ ಆಟಗಾರರಲ್ಲಿ ಅಗ್ರಪಂಕ್ತಿಯಲ್ಲಿದ್ದಾರೆ.
ಯಾವೆಲ್ಲಾ ಫ್ರಾಂಚೈಸಿಗಳು ರಾಹುಲ್ ಖರೀದಿಗೆ ಪ್ರಯತ್ನಿಸಬಹುದು?
ರಾಹುಲ್ರನ್ನು ಪಂಜಾಬ್ ಬಿಟ್ಟುಕೊಟ್ಟರೆ ಅಥವಾ ರಾಹುಲ್ ಪಂಜಾಬ್ ಬಿಟ್ಟುಬಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕನ್ನಡಿಗನನ್ನು ಖರೀದಿಸಲು ಮುಂದಾಗಬಹುದು. ಕೊಹ್ಲಿ ಮುಂದಿನ ಆವೃತ್ತಿಯಿಂದ ಆರ್ಸಿಬಿಯಲ್ಲಿ ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಕೊಹ್ಲಿಯನ್ನು ಬಿಟ್ಟರೆ ಆರ್ಸಿಬಿಯಲ್ಲಿ ತಂಡವನ್ನು ಮುನ್ನಡೆಸುವ ಯುವ ಹಾಗೂ ಸಮರ್ಥ ಆಟಗಾರರಿಲ್ಲ. ಅಲ್ಲದೆ ರಾಹುಲ್ ಒಬ್ಬ ಕನ್ನಡಿಗ ಹಾಗಾಗಿ ಕೊಹ್ಲಿ ಉತ್ತರಾಧಿಕಾರಕ್ಕೆ ರಾಹುಲ್ ಸೂಕ್ತ ಎನ್ನಲಾಗುತ್ತಿದೆ.
ಇನ್ನು ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಅತಂತ್ರ ಸ್ಥಿತಿಯಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ಕೂಡ ರಾಹುಲ್ರನ್ನು ಸೆಳೆಯಲು ಪ್ರಯತ್ನಿಸಬಹುದು. ವಾರ್ನರ್ ನಂತರ ನಾಯಕನಾದ ಕೇನ್ ವಿಲಿಯಮ್ಸನ್ನ ಕೂಡ ತಂಡಕ್ಕೆ ಪರಿಣಾಮಕಾರಿಯಾಗಿ ಮುನ್ನಡೆಸಲು ವಿಫಲವಾಗಿದ್ದು ಈ ಬಾರಿ ರಾಹುಲ್ ಖರೀದಿಸಲು ಪ್ರಯತ್ನಿಸಬಹುದು.
2021ರ ಐಪಿಎಲ್ನಲ್ಲಿ ಫೈನಲ್ ತಲುಪಿರುವ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಮೆಗಾ ಹರಾಜಿನಲ್ಲಿ ರಾಹುಲ್ ಖರೀದಿಸಬಹುದಾದ ಮತ್ತೊಂದು ತಂಡ. ಪ್ರಸ್ತುತ ನಾಯಕ ಎಂ.ಎಸ್.ಧೋನಿಗೆ 40 ವರ್ಷ ತುಂಬಿದೆ. ನಾಯಕತ್ವದಲ್ಲಿ ಈಗಲೂ ನಂಬರ್ 1 ಆಗಿದ್ದರೂ, ಬ್ಯಾಟಿಂಗ್ ಅವರ ವಯಸ್ಸನ್ನು ಎತ್ತಿ ತೋರಿಸುತ್ತಿದೆ. ಫ್ರಾಂಚೈಸಿ ಧೋನಿಯನ್ನು ಮುಂದಿನ ವರ್ಷವೂ ಆಡಿಸಲು ಒಲವು ತೋರುತ್ತಿದೆ. ಧೋನಿ ಕೂಡ ತಾವೂ ಚೆನ್ನೈನಲ್ಲಿ ನಿವೃತ್ತಿಯಾಗುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಭವಿಷ್ಯದ ಹಿತದೃಷ್ಟಿಯಿಂದ ಯುವ ನಾಯಕನ ಮೊರೆ ಹೋದರೂ ಆಶ್ಚರ್ಯವೇನಿಲ್ಲ.
ಇವಷ್ಟೇ ಅಲ್ಲದೆ, 2022ಕ್ಕೆ ಹೊಸದಾಗಿ 2 ತಂಡಗಳು ಐಪಿಎಲ್ಗೆ ಪದಾರ್ಪಣೆ ಮಾಡಲಿದೆ. ಖಂಡಿತಾ ಈ ತಂಡಗಳೂ ಸಹಾ ಕೆ.ಎಲ್.ರಾಹುಲ್ಗಾಗಿ ಮುಗಿಬೀಳಲಿವೆ ಎಂದರೆ ಅತಿಶಯೋಕ್ತಿಯಲ್ಲ. ಅಕ್ಟೋಬರ್ 25ರಂದು ಬಿಸಿಸಿಐ 2022ರ ಐಪಿಎಲ್ಗೆ ಎಷ್ಟು ಮಂದಿಯನ್ನು ರೀಟೈನ್ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಮಾಹಿತಿ ನೀಡಲಿದ್ದು, ಪಂಜಾಬ್ ಕಿಂಗ್ಸ್ ರಾಹುಲ್ ಅವರನ್ನು ಬಿಟ್ಟುಕೊಡುತ್ತಾ? ಎನ್ನುವುದು ಕುತೂಹಲದ ಸಂಗತಿ.
ಇದನ್ನೂ ಓದಿ: ಕಾರಣ ಹೇಳದೇ ನಾಯಕತ್ವದಿಂದ ಕೆಳಗಿಳಿಸಿದ್ದು ಈಗಲೂ ನುಂಗಲಾರದ ತುತ್ತಾಗಿದೆ: ಡೇವಿಡ್ ವಾರ್ನರ್