ನವದೆಹಲಿ: ಕೇವಲ ಒಂದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಕ್ಕೆ ಕರುಣ್ ನಾಯರ್ ಅವರನ್ನು ಡ್ರಾಪ್ ಮಾಡುವ ಮೂಲಕ ಮ್ಯಾನೇಜ್ಮೆಂಟ್ ಕರ್ನಾಟಕ ಬ್ಯಾಟ್ಸ್ಮನ್ ವಿಚಾರದಲ್ಲಿ ತುಂಬಾ ಒರಟು ನಿರ್ಧಾರ ತೆಗೆದುಕೊಂಡಿತು ಎಂದು ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
2016ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಕನ್ನಡಿಗ ಕರುಣ್ ನಾಯರ್ ಚೆನ್ನೈನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಆಕರ್ಷಕ ತ್ರಿಶತಕ ಬಾರಿಸಿದ್ದರು. ಸೆಹ್ವಾಗ್ ಹೊರತುಪಡಿಸಿದರೆ ಭಾರತದ ಪರ ತ್ರಿಶತಕ ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಜೊತೆಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಶತಕವನ್ನೇ ತ್ರಿಶತಕವನ್ನಾಗಿ ಪರಿವರ್ತಿಸಿದ ವಿಶ್ವದ 3ನೇ ಬ್ಯಾಟ್ಸ್ಮನ್ ಆಗಿದ್ದರು.
ಕರುಣ್ ನಾಯರ್ ಅವರ ಒಟ್ಟಾರೆ ಪ್ರಥಮ ದರ್ಜೆ ದಾಖಲೆಗಳ ಆಧಾರದ ಮೇಲೆ ಟೆಸ್ಟ್ ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆಯಲು ಅವಕಾಶವಿದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.
ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಆಟಗಾರರಲ್ಲಿ ಕರುಣ್ ನಾಯರ್ ಮೊದಲಿಗರಾಗಿದ್ದಾರೆ. ಅವರ ಟೆಸ್ಟ್ ಪಂದ್ಯದ ದಾಖಲೆಮತ್ತು ಅವರ ಪ್ರಥಮ ದರ್ಜೆ ಅಂಕಿ ಸಂಖ್ಯೆಗಳು ಕೂಡ ಅವರ ಕಮ್ಬ್ಯಾಕ್ಗೆ ಪೂರಕವಾಗಿವೆ. ಅವರು ಕೇವಲ ಒಂದೆರಡು ಪಂದ್ಯಗಳಲ್ಲಿ ಮಾತ್ರ ಸರಾಸರಿ ಪ್ರದರ್ಶನವನ್ನು ತೋರಿದ್ದಕ್ಕೆ ಮ್ಯಾನೇಜ್ಮೆಂಟ್ನಿಂದ ಸೈಡ್ಲೈನ್ಗೆ ಒಳಗಾದರು ಎಂದು Cricket.comಗೆ ತಿಳಿಸಿದ್ದಾರೆ.
ಕರುಣ್ ನಾಯರ್ ಭಾರತದ ಪರ 6 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 7 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದು ತ್ರಿಶತಕ ಸಹಿತ 374 ರನ್ಗಳಿಸಿದ್ದಾರೆ.
ಇದನ್ನೂ ಓದಿ: ಗಿಲ್ ಬದಲಿಗೆ ಬೇರೊಬ್ಬರಿಗೆ ಅವಕಾಶ ನೀಡಿದ್ರೆ ರಾಹುಲ್-ಮಯಾಂಕ್ಗೆ ಅವಮಾನ ಮಾಡಿದಂತೆ: ಕಪಿಲ್ ಎಚ್ಚರಿಕೆ