ಹೈದರಾಬಾದ್(ಡೆಸ್ಕ್): ದಿನೇಶ್ ಕಾರ್ತಿಕ್ ಈ ಬಾರಿ ಐಪಿಎಲ್ನ ಆಶ್ಚರ್ಯಕರ ಪ್ಯಾಕೇಜ್. ಕ್ರಿಕೆಟ್ ಅಭಿಮಾನಿಗಳು, ತಜ್ಞರಿಗೆ ತಮ್ಮ ಪ್ರದರ್ಶನದ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆಡಿರುವ ಎಲ್ಲಾ ಪಂದ್ಯಗಳಲ್ಲೂ ಆರ್ಸಿಬಿಗೆ ಅತ್ಯುತ್ತಮ ಕೊಡುಗೆ ನೀಡಿರುವ ಅವರು 2 ಬಾರಿ ಮ್ಯಾಚ್ ವಿನ್ನರ್ ಆಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಈಗಾಗಲೇ ಡಿಕೆ ಆಟಕ್ಕೆ ಮನಸೋತಿರುವ ಸಾಕಷ್ಟು ಲೆಜೆಂಡರಿ ಕ್ರಿಕೆಟಿಗರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಆ ಸಾಲಿಗೆ ಕಳೆದ ದಶಕದಲ್ಲಿ ಆರ್ಸಿಬಿ ಆಪತ್ಬಾಂಧವ ಎನಿಸಿಕೊಂಡಿದ್ದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಕೂಡ ಸೇರಿಕೊಂಡಿದ್ದು, ಸ್ಥಿರ ಪ್ರದರ್ಶನ ತೋರುತ್ತಿರುವ ಕಾರ್ತಿಕ್ ಆಟ ನನ್ನಲ್ಲಿ ಮತ್ತೆ ಕ್ರಿಕೆಟ್ ಆಡಬೇಕೆಂಬ ಭಾವನೆ ಹುಟ್ಟುಹಾಕುತ್ತಿದೆ ಎಂದು ತಿಳಿಸಿದ್ದಾರೆ.
ಈ ಆವೃತ್ತಿಗೂ ಮುನ್ನ ಎಬಿ ಡಿ ವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದರು. ಹಾಗಾಗಿ ಆರ್ಸಿಬಿಯಲ್ಲಿ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರ ಯಾರು ಎಂಬುದು ಪ್ರತಿಯೊಬ್ಬರ ತಲೆಯಲ್ಲಿದ್ದ ಅನುಮಾನವಾಗಿತ್ತು. ಎಬಿಡಿ ಸ್ಥಾನವನ್ನು ತುಂಬುವುದು ತುಂಬಾ ಕಷ್ಟವಾದರೂ ಈ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ಫ್ರಾಂಚೈಸಿಯಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ ಕೊರತೆ ಕಾಣದಂತೆ ಮಾಡಿದ್ದಾರೆ. ತಂಡ ಯಾವುದೇ ಸ್ಥಿತಿಯಲ್ಲಿದ್ದರೂ ಕ್ರೀಸ್ಗೆ ಆಗಮಿಸಿ ಇಡೀ ಪಂದ್ಯದ ಸ್ಥಿತಿಯನ್ನೇ ಬದಲಾಯಿಸಿ ಗೆಲುವಿಗೆ ಕಾರಣರಾಗುತ್ತಿದ್ದಾರೆ.
"ಡಿಕೆ ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿದ್ದಾರೆ. ಈಗಾಗಲೆ ಆರ್ಸಿಬಿಗೆ 2-3 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅವರು ತಮ್ಮ ವೃತ್ತಿ ಜೀವನದ ಅತ್ಯುತ್ತಮ ಲಯದಲ್ಲಿರುವಂತೆ ಭಾಸವಾಗುತ್ತಿದೆ. ಅದು ಅವರಿಗೆ ಹೇಗೆ ಸಾಧ್ಯವಾಗಿದೆಯೋ ಗೊತ್ತಿಲ್ಲ, ಏಕೆಂದರೆ ಅವರು ಸಾಕಷ್ಟು ಕ್ರಿಕೆಟ್ ಆಡಿರಲಿಲ್ಲ. ಆದರೆ ಆತ ಅದ್ಭುತ ಲಯದಲ್ಲಿದ್ದಾರೆ ಮತ್ತು ವಿಕೆಟ್ ಸುತ್ತಲೂ 360 ಡಿಗ್ರಿಯಲ್ಲಿ ಆಡುತ್ತಿದ್ದಾರೆ. ಅವರು ನಾನು ಮತ್ತೆ ಹಿಂತಿರುಗಿ ಕ್ರಿಕೆಟ್ ಆಡಬೇಕೆಂಬ ಹಾಗೂ ಆತ ಬ್ಯಾಟಿಂಗ್ ಮಾಡುವುದನ್ನು ಕಣ್ಣಾರೆ ನೋಡಬೇಕೆಂಬ ಭಾವನೆಯನ್ನು ನನ್ನಲ್ಲಿ ಮಾಡಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಒತ್ತಡದಲ್ಲಿ ಆಡುತ್ತಿದ್ದಾರೆ ಮತ್ತು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಇದೇ ಫಾರ್ಮ್ ಮುಂದುವರಿಸಿದರೆ ಆರ್ಸಿಬಿ ಬಹಳ ದೂರ ಸಾಗುವ ಅವಕಾಶವಿದೆ" ಎಂದು ಎಬಿ ಡಿ ವಿಲಿಯರ್ಸ್ ವಿಯು ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವಯಸ್ಸು ನೋಡದೆ ಟಿ20 ವಿಶ್ವಕಪ್ನಲ್ಲಿ ಅವರಿಗೆ ಚಾನ್ಸ್ ಕೊಡಿ, ಉತ್ತಮ ಫಿನಿಶರ್ ಆಗ್ತಾರೆ: ಗವಾಸ್ಕರ್