ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪದಾಧಿಕಾರಿಗಳ ಅಧಿಕಾರದ ಅವಧಿ ವಿಸ್ತರಣೆ ಕುರಿತು ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಬಿಸಿಸಿಐ ಅರ್ಜಿಯನ್ನು ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಬಿಸಿಸಿಐ ಅರ್ಜಿಯನ್ನು ವಿಚಾರಣೆ ನಡೆಸಲು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವನ್ನು ರಚಿಸಿ ಈ ಹಿಂದಿನ ಪೀಠದ ಜೊತೆಗೂಡಿ ಅರ್ಜಿ ವಿಚಾರಣೆಗೆ ಸೂಚಿಸಿದರು.
ಪ್ರಕರಣವೇನು?: ಪದಾಧಿಕಾರಿಗಳ ಅಧಿಕಾರವನ್ನು ವಿಸ್ತರಣೆ ಮಾಡಲು ಬಿಸಿಸಿಐ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಇದನ್ನು ಮಾನ್ಯ ಮಾಡಬೇಕು ಎಂದು ಕೋರಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ 2020 ರಲ್ಲಿ ಅರ್ಜಿ ಸಲ್ಲಿಸಿದೆ.
ಬಿಸಿಸಿಐ ಸಂವಿಧಾನದ ನಿಯಮಗಳ ಪ್ರಕಾರ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ, ಖಜಾಂಚಿ, ಜಂಟಿ ಕಾರ್ಯದರ್ಶಿಗಳು ಒಮ್ಮೆ 6 ವರ್ಷಗಳ ಕಾಲ ರಾಜ್ಯ, ರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದರೆ, ಮುಂದಿನ 3 ವರ್ಷಗಳ ಕಾಲ ಬಿಸಿಸಿಐನಲ್ಲಿ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸುವುದಕ್ಕೆ ಅನುಮತಿಯಿಲ್ಲ.
ಆದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರವಧಿಯನ್ನು ವಿಸ್ತರಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಸೌರವ್ ಗಂಗೂಲಿ ಮತ್ತು ಜಯ್ ಶಾ ಅವರ ಅಧಿಕಾರಾವಧಿಯು ಸೆಪ್ಟೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ.
ಓದಿ: ರಾಹುಲ್ ದ್ರಾವಿಡ್ಗೆ ಕೋವಿಡ್... ಏಷ್ಯಾ ಕಪ್ಗೆ ಟೀಂ ಇಂಡಿಯಾ ಕೋಚ್ ಆಗಿ ಲಕ್ಷ್ಮಣ್ ನೇಮಕ