ಹೈದರಾಬಾದ್: ತವರಿನಲ್ಲಿ ಏಕದಿನ ಮತ್ತು ಟಿ20 ಯಲ್ಲಿ ಪಾರಮ್ಯ ಮೆರೆದಿರುವ ಭಾರತಕ್ಕೆ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಮುಂದಿದೆ. ಫೆಬ್ರವರಿ 9 ರಂದು ನಾಗ್ಪುರದಲ್ಲಿ ನಡೆಯಲಿರುವ ಟೆಸ್ಟ್ಗೆ ಭಾರತ ಈಗಾಗಲೇ ಅಭ್ಯಾಸ ಆರಂಭಿಸಿದೆ. ಅತ್ತ ಪ್ರವಾಸಿ ಆಸ್ಟ್ರೇಲಿಯಾವು ಭಾರತದಲ್ಲಿ ತಮ್ಮ ಪ್ರಭಲ್ಯ ಮೆರೆಯಲು ಹಲವಾರು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಭಾರತೀಯರ ಸ್ವಿನ್ ದಾಳಿಯನ್ನು ಎದುರಿಸಲು ಬೆಂಗಳೂರಿನ ನೆಟ್ನಲ್ಲಿ ಕಾಂಗೂರು ನಾಡಿನ ಆಟಗಾರರು ಬೆವರಿಳಿಸುತ್ತಿದ್ದಾರೆ.
ತವರು ನೆಲದಲ್ಲಿ ಹರಿಣಗಳನ್ನು ಟೆಸ್ಟ್ ಸೀರಿಸ್ನಲ್ಲಿ ಕಟ್ಟಿಹಾಕಿ ಗೆದ್ದಿರುವ ಕಾಂಗರೂಗಳು ಅದೇ ಹುರುಪಿನಲ್ಲಿ ಭಾರತ ಪ್ರವಾಸದಲ್ಲಿದ್ದಾರೆ. 18 ವರ್ಷಗಳಲ್ಲಿ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ರೋಹಿತ್ ಪಡೆಯನ್ನು ಮಣಿಸಿ ದಾಖಲೆ ಬರೆಯಲು ಆಸ್ಟ್ರೇಲಿಯಾ ಮುಂದಾಗಿದೆ. ಇದಕ್ಕಾಗಿ ಹೆಚ್ಚಿನ ಸ್ಟ್ರಾಟಜಿಗಳನ್ನು ಮಾಡುತ್ತಿದೆ.
ಆಸ್ಟ್ರೇಲಿಯಾ ತಂಡ ಬೆಂಗಳೂರಿನಲ್ಲಿ ತರಬೇತಿ ಶಿಬಿರ ಏರ್ಪಡಿಸುವ ಮೂಲಕ ಭಾರತದ ಸ್ಪಿನ್ನರ್‌ಗಳಿಗೆ ಪೈಪೋಟಿ ನೀಡಲು ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ಆಸ್ಟ್ರೇಲಿಯಾ ಭಾರತದ ಜುನಾಗಢ್‌ನ ಸ್ಪಿನ್ನರ್‌ನ ಸಹಾಯವನ್ನೂ ಪಡೆಯುತ್ತಿದೆ. ಭಾರತ ತಂಡ ಸ್ಟಾರ್ ಸ್ಪಿನ್ನರ್ ಆಗಿರುವ ಆರ್ ಅಶ್ವಿನ್ ಬೌಲಿಂಗ್ ರೀತಿಯೇ ಸ್ಪಿನ್ ಮಾಡುವ ಆಟಗಾರರನ್ನು ಇಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದಾರೆ.
21 ವರ್ಷದ ಮಹೇಶ್ ಪಿಥಿಯಾ ಅವರು ಆರ್ ಅಶ್ವಿನ್ ಅವರಂತೆ ಬೌಲಿಂಗ್ ಮಾಡುತ್ತಾರೆ. ಡಿಸೆಂಬರ್ 2022 ರಲ್ಲಿ ಮಹೇಶ್ ಪಿಥಿಯಾ ಬರೋಡಾಗಾಗಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ರಣಜಿಯಲ್ಲಿ ಅವರ ಬೌಲಿಂಗ್ ಕಂಡ ಕ್ರಿಕೆಟ್ ಆಸ್ಟ್ರೇಲಿಯಾ ಮಹೇಶ್ ಅವರನ್ನು ಕರೆಸಿಕೊಂಡಿದೆ. ನೆಟ್ಸ್ನಲ್ಲಿ ಅಭ್ಯಾಸದಲ್ಲಿ ತೊಡಗಿರುವ ಕಾಂಗರೂ ಪಡೆಗೆ ಸ್ಪಿನ್ ಬೌಲಿಂಗ್ ಮಾಡುತ್ತಿದ್ದಾರೆ. ಭಾರತೀಯ ಸ್ಪಿನ್ನರ್ಗಳನ್ನು ಎದುರಿಸಲು ಆಸ್ಟ್ರೇಲಿಯಾ ಸಕಲ ತಯಾರಿ ನಡೆಸುತ್ತಿದೆ. ಮಹೇಶ್ ಅವರು ಆಸ್ಟ್ರೇಲಿಯಾ ತಂಡ ತಂಗಿರುವ ಅದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಇದಲ್ಲದೇ ಮಹೇಶ್ ಪಿಥಿಯಾ ಕೂಡ ಆಸ್ಟ್ರೇಲಿಯಾದ ಆಟಗಾರರೊಂದಿಗೆ ಬೆಂಗಳೂರು ನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಮಹೇಶ್ ಅವರ ಉತ್ತಮ ಆಫ್ ಸ್ಪಿನ್ ಬೌಲಿಂಗ್ ಅನ್ನು ಕಂಡ ಆಸ್ಟ್ರೇಲಿಯಾದ ಬೌಲಿಂಗ್ ಕೋಚ್ ಕರೆಸಿಕೊಂಡಿದ್ದಾರೆ. ವಿವಿಧ ಕಡೆ ಆಡಿರುವ ಮಹೇಶ್ ಇತ್ತೀಚೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡರು. ಭಾರತದಲ್ಲಿ ಟೆಸ್ಟ್ ಸರಣಿಗೆ ತಯಾರಾಗಲು ಆಸ್ಟ್ರೇಲಿಯಾಕ್ಕೆ ನೆಟ್ ಅಭ್ಯಾಸದಲ್ಲಿ ಸ್ಪಿನ್ನರ್‌ಗಳು ಬೇಕಾಗಿದ್ದರಿಂದ ಮಹೇಶ್ ಅವರಿಗೆ ಕೋಚ್ ಕಡೆಯಿಂದ ಆಹ್ವಾನ ಬಂದಿತ್ತು. ಅಶ್ವಿನ್ ರೀತಿಯ ಅವರ ಆ್ಯಕ್ಷನ್ ಮತ್ತು ಅವರ ಬೌಲಿಂಗ್ಗೆ ಮೆಚ್ಚಿ ನೆಟ್ ಬೌಲರ್ ಆಗಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.
ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಸ್ಟೀವ್ ಸ್ಮಿತ್ (ಉಪ ನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್
ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ: ನಾಗ್ಪುರ ತಲುಪಿದ ವಿರಾಟ್, ರಾಹುಲ್..