ಮುಂಬೈ: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಮೋಘ ಲಯದಲ್ಲಿರುವ ಇಂಗ್ಲೆಂಡ್ ಬ್ಯಾಟರ್ ಜಾಸ್ ಬಟ್ಲರ್ ರಾಜಸ್ಥಾನ್ ಪರ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಜಾಸ್ ಬಟ್ಲರ್ ಪ್ರಸ್ತುತ ಐಪಿಎಲ್ನಲ್ಲಿ ಆಡಿರುವ 9 ಪಂದ್ಯಗಳಿಂದ ತಲಾ ಮೂರು ಶತಕ ಮತ್ತು ಅರ್ಧಶತಕಗಳ ಸಹಿತ 566 ರನ್ಗಳಿಸಿದ್ದಾರೆ. ಇದು ರಾಜಸ್ಥಾನ್ ರಾಯಲ್ಸ್ ತಂಡ ಪರ ಬ್ಯಾಟರ್ ಒಬ್ಬ ಗಳಿಸಿದ ಗರಿಷ್ಠ ಮೊತ್ತವಾಗಿದೆ.
ಬಟ್ಲರ್ಗೂ ಮುನ್ನ ಅಜಿಂಕ್ಯ ರಹಾನೆ ಅತಿ ಹೆಚ್ಚು ರನ್ಗಳಿಸಿದ ದಾಖಲೆ ಹೊಂದಿದ್ದರು. ರಹಾನೆ 2012ರ ಆವೃತ್ತಿಯಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳ ಸಹಿತ 560 ರನ್ಗಳಿಸಿದ್ದರು. ಕಳೆದ 10 ವರ್ಷಗಳ ಕಾಲ ಇದೇ ರಾಯಲ್ಸ್ ತಂಡದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದೀಗ ಬಟ್ಲರ್ ಇನ್ನೂ 5 ಲೀಗ್ ಪಂದ್ಯಗಳಿರುವಾಗಲೇ ರಾಯಲ್ಸ್ ತಂಡದ ಗರಿಷ್ಠ ಸ್ಕೋರರ್ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
ಬಟ್ಲರ್ 2018ರ ಆವೃತ್ತಿಯಲ್ಲಿ 548 ರನ್ಗಳಿಸಿದ್ದು 3ನೇ ಅತ್ಯುತ್ತಮ ಪ್ರದರ್ಶನವಾಗಿದೆ. 2013ರಲ್ಲಿ ಶೇನ್ ವಾಟ್ಸನ್ 543, 2015ರಲ್ಲಿ ರಹಾನೆ 540 ರನ್ಗಳಿಸಿದ್ದರು.
ವಿರಾಟ್ ಕೊಹ್ಲಿ ದಾಖಲೆ ಮೇಲೆ ಕಣ್ಣು: 2016ರ ಆವೃತ್ತಿಯಲ್ಲಿ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 4 ಶತಕಗಳ ಸಹಿತ 973 ರನ್ಗಳಿಸಿದ್ದರು. ಇದೀಗ ಬಟ್ಲರ್ 9 ಪಂದ್ಯಗಳಿಂದ 566 ರನ್ಗಳಿಸಿದ್ದಾರೆ. ಇನ್ಮೂ 5 ಲೀಗ್ ಪಂದ್ಯಗಳು ಹಾಗೂ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಹೆಚ್ಚಿರುವುದರಿಂದ ಕನಿಷ್ಟ ಒಂದು ಪಂದ್ಯ ಹೆಚ್ಚುವರಿಯಾಗಿ ಸಿಗಲಿದೆ. ಈ ಆರು ಪಂದ್ಯಗಳಲ್ಲಿ ಬಟ್ಲರ್ 282 ರನ್ಗಳಿಸಿದರೆ ಡೇವಿಡ್ ವಾರ್ನರ್(848) ದಾಖಲೆಯನ್ನು, 407 ರನ್ಗಳಿಸಿದರೆ ವಿರಾಟ್ ಕೊಹ್ಲಿ ದಾಖಲೆಯನ್ನು ಬ್ರೇಕ್ ಮಾಡುವ ಅವಕಾಶವಿದೆ.
ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನವನ್ನು ಉಳಿಸಿಕೊಂಡರೆ 7 ಪಂದ್ಯ , ಫೈನಲ್ ಪ್ರವೇಶಿಸಿದರೆ 8 ಪಂದ್ಯಗಳನ್ನಾಡುವ ಅವಕಾಶ ಬಟ್ಲರ್ಗೆ ಸಿಗಲಿದ್ದು, ಖಂಡಿತ ಕೊಹ್ಲಿ ದಾಖಲೆಯನ್ನು ಮುರಿಯುವ ಅವಕಾಶ ಸಿಗಲಿದೆ.