ಮೆಲ್ಬೋರ್ನ್ : ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವರ್ಷದಲ್ಲಿ ಹೆಚ್ಚು ಟೆಸ್ಟ್ ರನ್ಗಳಿಸಿದ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ರನ್ನು ಹಿಂದಿಕ್ಕಿ 3ನೇ ಸ್ಥಾನ ಪಡೆದಿದ್ದಾರೆ.
ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ಜೋ ರೂಟ್ 82 ಎಸೆತಗಳಲ್ಲಿ 7 ಬೌಂಡರಿ ಸಹಿತ 50 ರನ್ಗಳಿಸಿ ಔಟಾದರು. ಆದರೂ ಅವರು 2021ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 1680 ರನ್ಗಳಿಸುವ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ರನ್ಗಳಿಸಿದ ವಿಶ್ವದ 3ನೇ ಬ್ಯಾಟರ್ ಎನಿಸಿದರು.
ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 2008ರಲ್ಲಿ 15 ಪಂದ್ಯಗಳಿಂದ 1656 ರನ್ಗಳಿಸಿ 3ನೇ ಸ್ಥಾನದಲ್ಲಿದ್ದರು. ಪಾಕಿಸ್ತಾನದ ಮೊಹಮ್ಮದ್ ಯೂಸುಫ್ 2006ರಲ್ಲಿ 1788 ರನ್ ಮತ್ತು ವೆಸ್ಟ್ ಇಂಡೀಸ್ನ ಮಾಜಿ ನಾಯಕ ಸರ್ ವಿವಿಯನ್ ರಿಚರ್ಡ್ಸ್ 1710 ರನ್ ಗಳಿಸಿದ್ದು ರೂಟ್ಗಿಂತ ಮುಂದಿದ್ದಾರೆ.
ಜೋ ರೂಟ್ ಈ ವರ್ಷ ಇನ್ನೂ ಒಂದು ಇನ್ನಿಂಗ್ಸ್ ಬ್ಯಾಟಿಂಗ್ ಮಾಡಲು ಅವಕಾಶವಿದೆ. ಬಾಕ್ಸಿಂಗ್ ಡೇ ಟೆಸ್ಟ್ 2ನೇ ಇನ್ನಿಂಗ್ಸ್ನಲ್ಲಿ 109 ರನ್ಗಳಿಸಿದರೆ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ಗಳಿಸಿದ ವಿಶ್ವ ದಾಖಲೆಗೆ ಪಾತ್ರರಾಗಲಿದ್ದಾರೆ.
ಈ ಸರಣಿಯಲ್ಲಿ ರೂಟ್ ಈಗಾಗಲೇ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್(1544), ಸುನೀಲ್ ಗವಾಸ್ಕರ್(1555), ಸಚಿನ್ ತೆಂಡೂಲ್ಕರ್(1562) ಮತ್ತು ಮೈಕಲ್ ಕ್ಲಾರ್ಕ್(1595) ದಾಖಲೆಗಳನ್ನು ಮುರಿದಿದ್ದಾರೆ. ಇಂಗ್ಲೆಂಡ್ ಪರ ಈ ಹಿಂದೆ 1481 ರನ್ಗಳಿಸಿದ್ದ ಮಾಜಿ ನಾಯಕ ಮೈಕಲ್ ವಾನ್ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ರನ್ಗಳಿಸಿದ ದಾಖಲೆ ಹೊಂದಿದ್ದರು.
ಇದನ್ನೂ ಓದಿ:ಆ್ಯಶಸ್ 3ನೇ ಟೆಸ್ಟ್ನ ಮೊದಲ ದಿನ ಆಸೀಸ್ ಪ್ರಾಬಲ್ಯ: 185ಕ್ಕೆ ಪತನ ಕಂಡ ಆಂಗ್ಲರು