ಲಾರ್ಡ್ಸ್, ಲಂಡನ್ : ಮಾಜಿ ನಾಯಕ ಜೋ ರೂಟ್ ಅಜೇಯ ಶತಕ ಹಾಗೂ ನಾಯಕ ಬೆನ್ ಸ್ಟೋಕ್ಸ್(54) ಅರ್ಧಶತಕಗಳ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ಗಳ ಜಯ ದಾಖಲಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿರುವ ಆಂಗ್ಲರು 1-0 ಮುನ್ನಡೆ ಸಾಧಿಸಿದ್ದು, ಮೂರು ದಿನಗಳಲ್ಲೇ ಪಂದ್ಯ ಅಂತ್ಯಗೊಂಡಿದೆ.
ಎರಡನೇ ಇನ್ನಿಂಗ್ಸ್ನಲ್ಲಿ 277 ರನ್ಗಳ ಗೆಲುವಿನ ಗುರಿ ಹೊಂದಿದ್ದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತು. 69 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಅಲೆಕ್ಸ್ ಲೀಸ್ (20), ಝಾಕ್ ಕ್ರಾಲಿ (9), ಒಲ್ಲಿ ಪೋಪ್ (10) ಹಾಗೂ ಜಾನಿ ಬೈರ್ಸ್ಟೋ (16) ಪೆವಿಲಿಯನ್ ಸೇರಿದ್ದರು. ಈ ವೇಳೆ ಒಂದಾದ ರೂಟ್ ಹಾಗೂ ಸ್ಟೋಕ್ಸ್ 90 ರನ್ ಸೇರಿಸಿ ತಂಡದ ಮೊತ್ತಕ್ಕೆ ಚೇತರಿಕೆ ನೀಡಿದರು.
54 ರನ್ ಗಳಿಸಿದ್ದ ಸ್ಟೋಕ್ಸ್ ಔಟಾದ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ರೂಟ್ (115) 26ನೇ ಶತಕ ದಾಖಲಿಸಿದರಲ್ಲದೆ, ತಂಡವನ್ನು ಗೆಲುವಿನ ದಡ ಸೇರಿಸಿದರು. ಬೆನ್ ಫೋಕ್ಸ್ ಅಜೇಯ 32 ಬಾರಿಸಿ ಗೆಲುವಿನಲ್ಲಿ ರೂಟ್ಗೆ ಸಾಥ್ ನೀಡಿದರು. ಕಿವೀಸ್ ಪರ ವೇಗಿ ಕೈಲ್ ಜೆಮಿಷನ್ 4 ವಿಕೆಟ್ ಕಬಳಿಸಿ ಮಿಂಚಿದರು.
ಇದಕ್ಕೂ ಮುನ್ನ ಪಂದ್ಯದ ಮೊದಲ ಇನ್ನಿಂಗ್ಸ್ಗಳಲ್ಲಿ ನ್ಯೂಜಿಲ್ಯಾಂಡ್ 132 ಹಾಗೂ ಇಂಗ್ಲೆಂಡ್ 141 ರನ್ಗಳಿಗೆ ಆಲೌಟ್ ಆಗಿದ್ದವು. ಬಳಿಕ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ನಲ್ಲೂ ಕುಸಿತದ ಹಾದಿ(56ಕ್ಕೆ 4 ವಿಕೆಟ್) ಹಿಡಿದರೂ ಕೂಡ, ಡೆರ್ಲ್ ಮಿಚೆಲ್ ಶತಕ (108) ಹಾಗೂ ಟಾಮ್ ಬ್ಲಂಡಲ್ (96) ಅರ್ಧಶಕದಿಂದ 285 ರನ್ ಪೇರಿಸಿತ್ತು.
ರೂಟ್ ದಾಖಲೆ : ಕಳೆದ ಏಪ್ರಿಲ್‌ನಲ್ಲಿ ಇಂಗ್ಲೆಂಡ್ ನಾಯಕ ಸ್ಥಾನದಿಂದ ಕೆಳಗಿಳಿದಿರುವ ಜೋ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ 10,000 ರನ್ ಗಳಿಸಿದ ಎರಡನೇ ಇಂಗ್ಲಿಷ್ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಮಾಜಿ ನಾಯಕ ಅಲೆಸ್ಟರ್ ಕುಕ್ (12,472) ಇವರಿಗಿಂತ ಮೊದಲು ಈ ಮೈಲುಗಲ್ಲು ತಲುಪಿದ ಮೊದಲ ಇಂಗ್ಲೆಂಡ್ ಆಟಗಾರನಾಗಿದ್ದಾರೆ.
ವಿಶ್ವ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (15,921), ರಿಕಿ ಪಾಂಟಿಂಗ್ (13,378), ಜಾಕ್ ಕಾಲಿಸ್ (13,289), ರಾಹುಲ್ ದ್ರಾವಿಡ್ (13,288) ಮತ್ತು ಅಲೆಸ್ಟೈರ್ ಕುಕ್ (12,472) ಇದ್ದಾರೆ.
-
If you know, you know 😅
— England Cricket (@englandcricket) June 4, 2022 " class="align-text-top noRightClick twitterSection" data="
🏴 #ENGvNZ 🇳🇿 pic.twitter.com/ZyIcvwkk8B
">If you know, you know 😅
— England Cricket (@englandcricket) June 4, 2022
🏴 #ENGvNZ 🇳🇿 pic.twitter.com/ZyIcvwkk8BIf you know, you know 😅
— England Cricket (@englandcricket) June 4, 2022
🏴 #ENGvNZ 🇳🇿 pic.twitter.com/ZyIcvwkk8B
ಮರುಕಳಿಸಿದ ಘಟನೆ : ಈ ಪಂದ್ಯದಲ್ಲಿ ಮೂರನೇ ದಿನದಾಟದಲ್ಲಿ 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ನಡೆದ ಘಟನೆ ಪುನರಾವರ್ತನೆ ಆದಂತಿತ್ತು. ಆಗ ಕ್ಷೇತ್ರರಕ್ಷಕ ಎಸೆದ ಬಾಲ್ ರನ್ಗಾಗಿ ಓಡುತ್ತಿದ್ದ ಬೆನ್ ಸ್ಟೋಕ್ಸ್ ಬ್ಯಾಟ್ಗೆ ತಗುಲಿ ಬೌಂಡರಿ ಗೆರೆ ದಾಟಿತ್ತು. ಇದು ನ್ಯೂಜಿಲೆಂಡ್ ತಂಡಕ್ಕೆ ನಷ್ಟ ಉಂಟು ಮಾಡಿತ್ತಲ್ಲದೆ, ವಿಶ್ವಕಪ್ ಟ್ರೋಫಿಯನ್ನೂ ಕಿತ್ತುಕೊಂಡಿತ್ತು.
ಈ ಟೆಸ್ಟ್ ಪಂದ್ಯದಲ್ಲಿ ಕೂಡ ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನ 42ನೇ ಓವರ್‌ನಲ್ಲಿ ಜೋ ರೂಟ್ ಮಿಡ್-ವಿಕೆಟ್ನತ್ತ ಪುಲ್ ಆಡಿದರು ಮತ್ತು ಇನ್ನೊಂದು ತುದಿಯಲ್ಲಿ ಸ್ಟೋಕ್ಸ್ ತ್ವರಿತ ಸಿಂಗಲ್ ಪಡೆಯಲು ಪ್ರಯತ್ನಿಸಿದರು. ಓಡುತ್ತಿರುವಾಗ, ಚೆಂಡು ಸ್ಟೋಕ್ಸ್ ಬ್ಯಾಟ್ಗೆ ತಾಕಿತ್ತಲ್ಲದೆ, ಬೇರೆಡೆಗೆ ಮುಖ ಮಾಡಿತ್ತು. ಆದರೆ, ಬ್ಯಾಟರ್‌ಗಳು ಸಿಂಗಲ್ ರನ್ಗಾಗಿ ಓಡಲಿಲ್ಲ.
ಈ ಘಟನೆ ನಂತರ, ಬೌಲಿಂಗ್ ಮಾಡುತ್ತಿದ್ದ ವೇಗಿ ಟ್ರೆಂಟ್ ಬೌಲ್ಟ್ ಹಾಗೂ ಬ್ಯಾಟರ್ ಸ್ಟೋಕ್ಸ್ ಸೌಹಾರ್ದಯುತ ಮಾತಿನ ವಿನಿಮಯ ಮಾಡಿಕೊಂಡರು. ಮೂರು ವರ್ಷಗಳ ಹಿಂದೆ ನಡೆದ ಘಟನೆ ನೆನಪಿಸಿಕೊಂಡು ಮೈದಾನದಲ್ಲಿದ್ದ ಇತರ ಆಟಗಾರರೆಲ್ಲರ ಮುಖದಲ್ಲಿ ನಗು ಮೂಡಿತು.
ಇದನ್ನೂ ಓದಿ: 8 ಕಿಮೀ ಮ್ಯಾರಥಾನ್ನಲ್ಲಿ 7ವರ್ಷದ ಪೋರನಿಗೆ ಚಿನ್ನದ ಪದಕ: ನೇಪಾಳದಲ್ಲಿ ತಿರಂಗ ಧ್ವಜ ಹಾರಿಸಿದ ಹಾವೇರಿ ಬಾಲಕ