ಮುಂಬೈ: ಕೋವಿಡ್ 19 ಸೋಂಕು ತಗುಲಿದ್ದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಆಲ್ರೌಂಡರ್ ಜಯಂತ್ ಯಾದವ್ ತಂಡ ಸೇರಿಕೊಂಡಿದ್ದಾರೆ.
ಟೆಸ್ಟ್ ಸರಣಿಯ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿರುವ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಬ್ಯಾಕ್ಅಪ್ ಆಗಿ ನವದೀಪ್ ಸೈನಿ ಕೂಡ ಹರಿಣಗಳ ನಾಡಿಗೆ ವಿಮಾನವೇರಲಿದ್ದಾರೆ.
ಟೀಮ್ ಇಂಡಿಯಾ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ಗೆ ಬೆಂಗಳೂರಿನಲ್ಲಿ ತರಬೇತಿ ಶಿಬಿರದಲ್ಲಿದ್ದ ವೇಳೆ ಕೋವಿಡ್ ತಗುಲಿರುವ ಕಾರಣ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಇದನ್ನೂ ಓದಿ:5 ವರ್ಷಗಳ ನಂತರ ಐಪಿಎಲ್ಗೆ ಮರಳುವ ಸುಳಿವು ಕೊಟ್ಟ ಮಿಚೆಲ್ ಸ್ಟಾರ್ಕ್
ಸುಂದರ್ ಜನವರಿ 19ರಿಂದ ಆರಂಭವಾಗಬೇಕಿರುವ ಏಕದಿನ ಸರಣಿಗಾಗಿ ಬುಧವಾರ ಕೇಪ್ಟೌನ್ಗೆ ಪ್ರಯಾಣಿಸಬೇಕಾಗಿತ್ತು. ಅಲ್ಲಿ ಏಕದಿನ ಸರಣಿಗೂ ಮುನ್ನ ಭಾರತ ತಂಡವನ್ನು ಸೇರಿಕೊಳ್ಳಬೇಕಾಗಿತ್ತು. ಆದರೆ ಸೋಂಕು ತಗುಲಿರುವ ಕಾರಣ ಅವರು ಪ್ರವಾಸದಿಂದ ಹೊರಗುಳಿಯಲಿದ್ದಾರೆ.
ಜನವರಿ 19 ಮತ್ತು 21ರಂದು ಪರ್ಲ್ನಲ್ಲಿ ಟೀಂ ಇಂಡಿಯಾ ಏಕದಿನ ಪಂದ್ಯಗಳನ್ನಾಡಲಿದೆ. ಕೇಪ್ಟೌನ್ನಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿ ತಂಡ ತವರಿಗೆ ಮರಳಲಿದೆ. ಈ ತಂಡವನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಮುನ್ನಡೆಸುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ತಂಡದ ಉಪನಾಯಕನಾಗಿದ್ದಾರೆ.
ಭಾರತ ಏಕದಿನ ತಂಡ:
ಕೆ.ಎಲ್.ರಾಹುಲ್ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ಆರ್.ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಎಂ.ಡಿ.ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.
ಇದನ್ನೂ ಓದಿ:ಟೆಸ್ಟ್ ರ‍್ಯಾಂಕಿಂಗ್: ಮತ್ತೆ 3ನೇ ಸ್ಥಾನಕ್ಕೆ ಮರಳಿದ ಸ್ಮಿತ್, ಅಶ್ವಿನ್ ಸ್ಥಾನ ಅಬಾಧಿತ