ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಭಾರತ ತಂಡಕ್ಕೆ ಬಿಗ್ ಶಾಕ್ ಉಂಟಾಗಿದೆ. ಭಾರತದ ಪ್ರಮುಖ ವೇಗಿ, ಬೌಲಿಂಗ್ ಟ್ರಂಪ್ ಕಾರ್ಡ್ ಜಸ್ಪ್ರೀತ್ ಬೂಮ್ರಾ ಬೆನ್ನು ನೋವಿನ ಕಾರಣಕ್ಕೆ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ.
ಈ ಬಗ್ಗೆ ಬಿಸಿಸಿಐ ಅಧಿಕೃತ ಪ್ರಕಟಣೆ ನೀಡದಿದ್ದರೂ, ಬಿಸಿಸಿಐ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ. ಜಸ್ಪ್ರೀತ್ ಬೂಮ್ರಾ ತೀವ್ರ ಬೆನ್ನು ನೋವಿಗೆ ಒಳಗಾಗಿದ್ದಾರೆ. ಇನ್ನು ಆರು ತಿಂಗಳು ಕ್ರಿಕೆಟ್ನಿಂದ ದೂರವಿರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈಗಾಗಲೇ ಕಾಲಿಗೆ ಗಾಯ ಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಲ್ರೌಂಡರ್ ರವೀಂದ್ರ ಜಡೇಜಾ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಪಂದ್ಯಗಳಲ್ಲಿ ಬೂಮ್ರಾ ಕಣಕ್ಕಿಯದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರದ ಕಾರಣ ಅವರು ಸರಣಿಯ ಎಲ್ಲ ಪಂದ್ಯಗಳಲ್ಲಿ ಭಾಗವಹಿಸುತ್ತಿಲ್ಲ ಎಂಬ ವಾದ ಕೇಳಿ ಬಂದಿತ್ತು.
ಇದೀಗ ಬೆನ್ನು ಮೂಳೆ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದೆ. ಆಸೀಸ್ ವಿರುದ್ಧ 2ನೇ ಪಂದ್ಯವಾಡಿದ್ದ ಬೂಮ್ರಾ ಮೊದಲ, ಮೂರನೇ ಪಂದ್ಯದಿಂದ ಹೊರಗುಳಿದಿದ್ದರು. ಇದಲ್ಲದೇ, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲೂ ಅವರು ಆಡಿಲ್ಲ.
ಇದು ಎರಡನೇ ಶಾಕ್: ಏಷ್ಯಾಕಪ್ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡು ಅರ್ಧದಲ್ಲೇ ಟೂರ್ನಿಯಿಂದ ಹೊರನಡೆದಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜಡೇಜಾಗೆ ಕೆಲ ವಾರಗಳ ವಿಶ್ರಾಂತಿ ಬೇಕಿರುವ ಕಾರಣ ಅವರನ್ನು ವಿಶ್ವಕಪ್ ತಂಡಕ್ಕೆ ಪರಿಗಣಿಸಿಲ್ಲ. ಗಾಯದಿಂದ ಚೇತರಿಸಿಕೊಂಡಿದ್ದಾರೆ ಎಂದು ಬೂಮ್ರಾಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಇದೀಗ ಮತ್ತೆ ಗಾಯಕ್ಕೀಡಾಗಿರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ.
ಓದಿ: ಸುನಿಲ್ ಛೆಟ್ರಿ ಬಗ್ಗೆ ಕ್ಯಾಪ್ಟನ್ ಫೆಂಟಾಸ್ಟಿಕ್ ಸಿರೀಸ್ ಬಿಡುಗಡೆ: ಪ್ರಧಾನಿ ಅಭಿನಂದನೆ