ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜು ಹತ್ತಿರ ಬರುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳು ನಾಯಕತ್ವ ನಿರ್ವಹಿಸುವ ಆಟಗಾರರನ್ನು ಎದುರು ನೋಡುತ್ತಿವೆ.
ಅದರಲ್ಲೂ ಆರ್ಸಿಬಿ ಮೇಲೆ ಎಲ್ಲರ ಕಣ್ಣಿದೆ. ವಿರಾಟ್ ಕೊಹ್ಲಿ ಸ್ಥಾನಕ್ಕೆ ಯಾರು ಸರಿಯಾದ ಆಯ್ಕೆ ಎಂಬ ಚರ್ಚೆ ಸಾಗುತ್ತಿದೆ. ಭಾರತದ ಮಾಜಿ ನಾಯಕ ಕಳೆದ ಆವೃತ್ತಿಯಲ್ಲಿ ಆರ್ಸಿಬಿ ನಾಯಕತ್ವವನ್ನು ತ್ಯಜಿಸಿದ್ದರು.
ದಶಕದ ಕಾಲ ತಂಡವನ್ನು ಮುನ್ನಡೆಸಿದರೂ ಪ್ರಶಸ್ತಿ ಎತ್ತಿ ಹಿಡಿಯಲು ಸಾಧ್ಯವಾಗದೇ ಕೊನೆಗೆ ನಾಯಕತ್ವವನ್ನ ಬಿಟ್ಟುಕೊಟ್ಟು ಕೇವಲ ಆಟಗಾರನಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ.
ಪ್ರಸ್ತುತ ಆರ್ಸಿಬಿ ಮೂರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ಮೊಹಮ್ಮದ್ ಸಿರಾಜ್ರನ್ನು ಕ್ರಮವಾಗಿ 15 ಕೋಟಿ ರೂ., 11ಕೋಟಿ ರೂ. ಮತ್ತು 7 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿದೆ. ಬಿಬಿಎಲ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಮುನ್ನಡೆಸಿದ ಅನುಭವವಿದ್ದು, ಅವರಿಗೆ ಆರ್ಸಿಬಿ ನಾಯಕತ್ವವನ್ನು ನೀಡಬಹುದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಯುಎಇಗಿಂತಲೂ ಕಡಿಮೆ ವೆಚ್ಚದಲ್ಲಿ ಐಪಿಎಲ್ ಆಯೋಜಿಸಲು ಆಫರ್ ನೀಡಿದ ದಕ್ಷಿಣ ಆಫ್ರಿಕಾ
ಆದರೆ, ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಆಕಾಶ್ ಚೋಪ್ರಾ ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್ ಆರ್ಸಿಬಿ ನಾಯಕತ್ವಕ್ಕೆ ಸೂಕ್ತ ಆಟಗಾರನಾಗಬಹುದು ಎಂದು ಸಲಹೆ ನೀಡಿದ್ದಾರೆ.
"ಒಂದು ವೇಳೆ ಮ್ಯಾಕ್ಸ್ವೆಲ್ಗೆ ಆರ್ಸಿಬಿ ನಾಯಕತ್ವ ನೀಡದಿದ್ದರೆ, ಜೇಸನ್ ಹೋಲ್ಡರ್ ನಾಯಕತ್ವದ ಅಭ್ಯರ್ಥಿಯಾದರೆ ಹೇಗೆ?. ಏಕೆಂದರೆ, ತಂಡದಲ್ಲಿ ಒಬ್ಬ ಆಲ್ರೌಂಡರ್ನ ಅಗತ್ಯವಿದೆ. ಅಲ್ಲದೆ ಹೋಲ್ಡರ್ಗೆ ನಾಯಕತ್ವ ಜವಾಬ್ದಾರಿಯನ್ನು ನಿರ್ವಹಿಸುವ ಸಾಮರ್ಥ್ಯವಿದೆ" ಎಂದು ಚೋಪ್ರಾ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೆಗಾ ಹರಾಜಿನಲ್ಲಿ ಭಾರತದ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಕರ್ನಾಟಕದ ಮನೀಶ್ ಪಾಂಡೆ ಕೂಡ ಇರಲಿದ್ದು, ಇವರಲ್ಲಿ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ