ಲಾಹೋರ್: 2024-2031ರವರೆಗಿನ ಪ್ರಮುಖ ಟೂರ್ನಮೆಂಟ್ಗಳ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, 2025ರ ಚಾಂಪಿಯನ್ ಟ್ರೋಫಿ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಿದೆ.
ಆದರೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ದ್ವಿಪಕ್ಷೀಯ ಸಂಬಂಧ ಸರಿಯಿಲ್ಲದಿರುವುದರಿಂದ ಭಾರತ ತಂಡ ಚಾಂಪಿಯನ್ ಟ್ರೋಫಿಯಲ್ಲಿ ಭಾಗವಹಿಸಲಿದೆಯೇ ಎಂಬುದು ದೊಡ್ಡ ಪ್ರಶ್ನೆ ಮತ್ತು ಕುತೂಹಲಕಾರಿ ಸಂಗತಿ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಆದರೆ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಗೆ ಬರುತ್ತದೆ. ದೊಡ್ಡ ಟೂರ್ನಮೆಂಟ್ ಅನ್ನು ತ್ಯಜಿಸುವುದು ಸುಲಭದ ಮಾತಲ್ಲ ಎಂದಿದ್ದಾರೆ.
"ಒಮ್ಮೆ ಆಯೋಜನೆ ಹಕ್ಕನ್ನು ನೀಡಿದ ಮೇಲೆ ಯಾವುದೇ ಅಂತಾರಾಷ್ಟ್ರೀಯ ಟೂರ್ನಮೆಂಟ್ಗಳಿಂದ ಹೊರ ಹೋಗುವುದು ಸುಲಭದ ಕೆಲಸವಲ್ಲ. ಆತಿಥೇಯರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಮಂಡಳಿಗಳ ನಡುವಿನ ವೈಷಮ್ಯವನ್ನು ಸಹಾ ಮಂಡಳಿ(ಐಸಿಸಿ) ಪರಿಗಣನೆಗೆ ತೆಗೆದುಕೊಂಡಿರುತ್ತದೆ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ, ಭಾರತ ತಂಡ ಕೂಡ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಭಾವಿಸುತ್ತೇನೆ" ಎಂದು ರಮೀಜ್ ರಾಜಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಆದರೆ ಪ್ರಸ್ತುತ ಸಮಯದಲ್ಲಿ ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸರಣಿ ಆಯೋಜನೆ ಅಸಾಧ್ಯ. ಆದರೆ ಎರಡೂ ತಂಡಗಳು ಒಟ್ಟಾಗಿ ತ್ರಿಕೋನ ಸರಣಿಯಲ್ಲಿ ಆಡುವ ಭರವಸೆಯ ಇಟ್ಟುಕೊಳ್ಳಬಹುದು ಎಂದು ಪಿಸಿಬಿ ಅಧ್ಯಕ್ಷ ತಿಳಿಸಿದ್ದಾರೆ.
ಇದನ್ನು ಓದಿ:ಭಾರತ ತಂಡದಲ್ಲಿ ಆಡುವುದು ನನ್ನ ಕನಸು, ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಿದ್ಧ: ಅಯ್ಯರ್