ಹೋಬರ್ಟ್: ಗಾಯದ ನಡುವೆ ರಾಷ್ಟ್ರೀಯ ತಂಡದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳುವುದಕ್ಕೆ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಮಹತ್ವ ನೀಡಿ ಕಳೆದ 5 ವರ್ಷಗಳಿಂದ ಐಪಿಎಲ್ ತೊರೆದಿದ್ದ ಆಸೀಸ್ ವೇಗಿ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ಮುಂಬರುವ ಐಪಿಎಲ್ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೊನೆಯ ಬಾರಿ 2015ರ ಐಪಿಎಲ್ನಲ್ಲಿ ಆಡಿದ್ದ ಸ್ಟಾರ್ಕ್, "ಐಪಿಎಲ್ ಮೆಗಾ ಹರಾಜಿನಲ್ಲಿ ತಮ್ಮ ಹೆಸರು ಸೇರಿಸಲು ಇನ್ನೂ ನಿರ್ಧಾರ ಮಾಡಿಲ್ಲ. ಹೆಸರನ್ನು ನೋಂದಾಯಿಸಿಕೊಳ್ಳಲು ಶುಕ್ರವಾರ ಅಂತಿಮ ದಿನವಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತರಬೇತಿಗೆ ತೆರಳುವ ಮುನ್ನ ಮುಗಿಸಬಹುದು. ಆದರೆ ಅದಕ್ಕೆ ಎರಡು ದಿನಗಳ ಸಮಯವಿದೆ. ಮುಂದಿನ ವೇಳಾಪಟ್ಟಿಯನ್ನು ಗಮನಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇನೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ವೆಬ್ಸೈಟ್ಗೆ ತಿಳಿಸಿದ್ದಾರೆ.
ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜನವರಿ 13ರ ಒಳಗೆ ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಆಸೀಸ್ನ ಬೌಲಿಂಗ್ ಶಕ್ತಿಯಾಗಿರುವ ಸ್ಟಾರ್ಕ್ 2014 ಮತ್ತು 15ರ ಆವೃತ್ತಿಯಲ್ಲಿ ಆರ್ಸಿಬಿ ಪರ ಆಡಿದ್ದರು. ಅವರು 27 ಪಂದ್ಯಗಳಿಂದ 7.16 ಎಕಾನಮಿಯಲ್ಲಿ 34 ವಿಕೆಟ್ ಪಡೆದಿದ್ದರು.
"ಕಳೆದ 6 ವರ್ಷಗಳಿಂದ ನಾನು ಐಪಿಎಲ್ ಆಡಿಲ್ಲ. ಆದರೆ ಕೆಲವು ವರ್ಷಗಳಿಂದ ಟಿ20 ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ವರ್ಷ ಆಸ್ಟ್ರೇಲಿಯಾದಲ್ಲೇ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಕೂಡ ನಡೆಯಲಿರುವುದರಿಂದ, ವೇಳಾಪಟ್ಟಿಯ ಕಡೆಗೆ ಗಮನ ಕೊಡಬೇಕಾಗುತ್ತದೆ. ಜೊತೆಗೆ ಪಾಕಿಸ್ತಾನ ಪ್ರವಾಸಕ್ಕೂ ಮುನ್ನ ತವರಿನಲ್ಲಿ ಕೆಲವು ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗಳನ್ನಾಡಲಿದ್ದೇವೆ. ಹಾಗಾಗಿ ಐಪಿಎಲ್ ಆಡುವ ಬಗ್ಗೆ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದು ಸ್ಟಾರ್ಕ್ ತಿಳಿಸಿದ್ದಾರೆ.
2022ರ ಐಪಿಎಲ್ನಿಂದ 8ರ ಬದಲು 10 ತಂಡಗಳು ಸ್ಪರ್ಧಿಸಲಿವೆ. ಹಾಗಾಗಿ ಹೆಚ್ಚು ಆಟಗಾರರಿಗೆ ನಗದು ಸಮೃದ್ಧ ಲೀಗ್ನಲ್ಲಿ ಅವಕಾಶಗಳು ಸಿಗಲಿವೆ. ವೇಗಿಗಳಿಗೆ ಲೀಗ್ನಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಸ್ಟಾರ್ಕ್ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆದರೆ ಅಚ್ಚರಿಯೇನಿಲ್ಲ.
ಇದನ್ನೂ ಓದಿ:ಐಪಿಎಲ್ 2022: ರಿಟೈನ್ ಆಟಗಾರರನ್ನು ಘೋಷಿಸಲು ಹೊಸ ಫ್ರಾಂಚೈಸಿಗಳಿಗೆ ಜನವರಿ 22 ಡೆಡ್ಲೈನ್