ಲಂಡನ್: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೆ, ಸೌರವ್ ಗಂಗೂಲಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
1996ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಎಡಗೈ ಆಟಗಾರ ಗಂಗೂಲಿಯು ತಮ್ಮ ಪಾದಾರ್ಪಣೆ ಪಂದ್ಯದಲ್ಲಿ 131ರನ್ನು ಸಿಡಿಸಿ ಈ ಸಾಧನೆ ಮಾಡಿದ್ದರು. ಇದೀಗ ಡೆವೊನ್ ಕಾನ್ವೆ ತಮ್ಮ ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಈ ದಾಖಲೆ ಮುರಿದಿದ್ದಾರೆ.
ಈ ಸಾಧನೆಯ ಸಾಲಿನಲ್ಲಿ ಲಾರ್ಡ್ಸ್ನ ಅಂಗಳದಲ್ಲಿ ಆಸ್ಟ್ರೇಲಿಯಾದ ಹ್ಯಾರಿ ಗ್ರಹಾಂ 1893ರಲ್ಲಿ 107ರನ್ ಗಳಿಸಿದ್ದರು. ಅಲ್ಲದೆ ಆ್ಯಂಡ್ರೂ ಸ್ಟ್ರಾಸ್ 112, ಮ್ಯಾಟ್ ಪ್ರಿಯರ್ 126 ರನ್ ದಾಖಲಿಸಿದ್ದರು.
ಈ ಸಾಧನೆ ಮಾಡಿದ ಬಳಿಕ ಮಾತನಾಡಿದ ನ್ಯೂಜಿಲೆಂಡ್ ಆಟಗಾರ ಕಾನ್ವೆ, ಇದು ನನ್ನ ಕ್ರಿಕೆಟ್ ಜೀವನದ ಅತ್ಯುತ್ತಮ ದಿನ, ಇದು ಉತ್ತಮ ಆರಂಭದ ಕನಸು ನನಸಾದಂತೆ ಆಗಿದೆ. ಈ ಖುಷಿಯ ಕ್ಷಣದಿಂದ ಹೊರಬರಲು ನನಗೆ ಕೆಲ ದಿನಗಳು ಬೇಕಾಗುತ್ತವೆ ಎಂದಿದ್ದಾರೆ.
ಕಾನ್ವೆ ಮೂಲತಃ ದಕ್ಷಿಣ ಆಫ್ರಿಕಾದವರು, 2017ರಲ್ಲಿ ನ್ಯೂಜಿಲೆಂಡ್ಗೆ ಬಂದು ನೆಲೆಸಿದ್ದರು. ಮೊದಲಿಗೆ ದೇಶಿಯ ಮಟ್ಟದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಫ್ರ್ಯಾಂಚೈಸ್ ಮಟ್ಟದಲ್ಲಿ ಲಯನ್ಸ್ಗಾಗಿ 12 ಪ್ರಥಮ ದರ್ಜೆ ಪಂದ್ಯಾಟ ಆಡಿದ್ದರು.
ನನಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಅವಕಾಶ ನೀಡಿದ್ದಕ್ಕೆ ತಂಡಕ್ಕೆ ಧನ್ಯವಾದಗಳು. ನಾನು ಖಂಡಿತವಾಗಿಯೂ ಮೊದಲ ಶತಕದ ಕುರಿತು ಯಾವುದೇ ಯೋಚನೆ ಹೊಂದಿರಲಿಲ್ಲ ಎಂದಿದ್ದಾರೆ.