ಲಂಡನ್: ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲಿಂಗ್ಗಿಂತ ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿ ಅತ್ಯುತ್ತಮವಾಗಿತ್ತು ಎಂದು ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಒಪ್ಪಿಕೊಂಡಿದ್ದಾರೆ. ಹೆಡಿಂಗ್ಲೆಯಲ್ಲಿ ನಡೆದ 3ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಕೇವಲ 78ಕ್ಕೆ ಆಲೌಟ್ ಆಗಿತ್ತು. ಅಲ್ಲದೇ ಎರಡನೇ ಇನ್ನಿಂಗ್ಸ್ನಲ್ಲೂ ದಿಢೀರ್ ಕುಸಿದು ಇನ್ನಿಂಗ್ಸ್ ಮತ್ತು 76 ರನ್ಗಳ ಸೋಲು ಕಂಡಿತ್ತು.
ನೀವು ಲಾರ್ಡ್ಸ್ ಟೆಸ್ಟ್ ಪಂದ್ಯ ಗಮನಿಸಿ, ನೀವು ಖಂಡಿತ ಭಾರತದ ಬೌಲಿಂಗ್ ಇಂಗ್ಲೆಂಡ್ ದಾಳಿಗಿಂತ ಉತ್ತಮವಾಗಿತ್ತು ಎಂದು ಹೇಳುತ್ತೀರಿ. ಆ ಸಂದರ್ಭದಲ್ಲಿ ಭಾರತೀಯ ಬೌಲರ್ಗಳು ಚೆಂಡನ್ನು ಸ್ವಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿ ಅವರೆಲ್ಲರೂ ತಮ್ಮಿಂದ ಸಾಧ್ಯವಾದದ್ದೆಲ್ಲವನ್ನು ಮಾಡಿದ್ದರು ಎಂದು ಅರುಣ್ ಹೇಳಿದರು.
ಆದರೆ, ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ಬೌಲಿಂಗ್ ನಮಗೆ ತುಂಬಾ ಚೆನ್ನಾಗಿತ್ತು. ಒಂದು ವೇಳೆ ಅವರು 78 ರನ್ಗಳನ್ನು ಡಿಫೆಂಡ್ ಮಾಡುವಂತಿದ್ದರೆ ಹೇಗೆ ಬೌಲಿಂಗ್ ಮಾಡುತ್ತಿದ್ದರು ಎಂಬುವುದನ್ನು ನೋಡಲು ನಾನು ಬಯಸುತ್ತೇನೆ. ಹೌದು, ಯಾವಾಗಲೂ ಸುಧಾರಣೆಗೆ ಅವಕಾಶವಿದೆ ಮತ್ತು ನಾವು ವೈಫಲ್ಯ ಅನುಭವಿಸಿದ ಆ ಪ್ರದೇಶಗಳನ್ನು ನೋಡಿದ್ದೇವೆ ಮತ್ತು ಮುಂಬರುವ ಟೆಸ್ಟ್ ಪಂದ್ಯದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಇನ್ನು 3ನೇ ಟೆಸ್ಟ್ನಲ್ಲಿ ಇಶಾಂತ್ ಲಯ ಕಳೆದುಕೊಂಡಿದ್ದ ತಂಡಕ್ಕೆ ಹಿನ್ನಡೆಯಾಯಿತು ಎಂದು ಕೇಳಿದ್ದಕ್ಕೆ ಉತ್ತರಿಸಿದ 58 ವರ್ಷದ ಅರುಣ್, ಇಶಾಂತ್ ಅವರ ಕಳೆದ ಪಂದ್ಯದ ಫಾರ್ಮ್ ನಮಗೆ ಕಳವಳ ತಂದಿದೆ.
ಆದರೆ, ನಾವು ಆ ಸಮಸ್ಯೆಯನ್ನು ಈಗಾಗಲೇ ಬಗೆಹಿರಿಸಿಕೊಂಡಿದ್ದೇವೆ ಎಂದರು. ಕರ್ನಾಟಕದ ಪ್ರಸಿಧ್ ಕೃಷ್ಣ ಅವರ ಆಯ್ಕೆ ಬಗ್ಗೆ ಮಾತನಾಡಿ ತಂಡದಲ್ಲಿನ ಕೆಲಸ ಹೊರೆ ನಿರ್ವಹಣೆ ಮಾಡಬೇಕೆಂದಾದರೆ ಅಗತ್ಯವಾಗಬಹುದೆಂದು ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಇದನ್ನು ಓದಿ:50 ವರ್ಷಗಳಿಂದ ಓವಲ್ನಲ್ಲಿ ಭಾರತಕ್ಕಿಲ್ಲ ಗೆಲುವು.. ಮರುಕಳಿಸುವುದೇ ಗಬ್ಬಾ ವಿಜಯ?