ನವದೆಹಲಿ: ಲೀಡ್ಸ್ ಟೆಸ್ಟ್ನಲ್ಲಿ ಇನ್ನಿಂಗ್ಸ್ ಮತ್ತು 76 ರನ್ಗಳ ಅಂತರದಿಂದ ಸೋಲು ಕಂಡಿರುವ ಭಾರತ ತಂಡದಲ್ಲಿ ಬದಲಾವಣೆ ಆಗಲಿದೆ. 3ನೇ ಟೆಸ್ಟ್ನಲ್ಲಿ ವೈಫಲ್ಯ ಅನುಭವಿಸಿದ ವೇಗಿ ಇಶಾಂತ್ ಶರ್ಮಾ ಬದಲಿಗೆ ಸ್ಪಿನ್ನರ್ ಅಶ್ವಿನ್ ತಂಡಕ್ಕೆ ಸೇರ್ಪಡೆಯಾಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇಶಾಂತ್ ಶರ್ಮಾ 22 ಓವರ್ಗಳಲ್ಲಿ ಯಾವುದೇ ಮೇಡನ್ ಓವರ್ ಇಲ್ಲದೆ 92 ರನ್ ಬಿಟ್ಟುಕೊಟ್ಟಿದ್ದರು. ಮೊನಚಿಲ್ಲದ ದಾಳಿಯನ್ನು ಬೆಂಡೆತ್ತಿದ್ದ ಇಂಗ್ಲೀಷ್ ಬ್ಯಾಟ್ಸ್ಮನ್ಗಳು 432 ರನ್ ಸೂರೆಗೈದಿದ್ದರು. ಆದ್ದರಿಂದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಇಶಾಂತ್ ಹೊರ ಬೀಳುವ ಸಾಧ್ಯತೆಯಿದೆ.
ಅಲ್ಲದೆ ಇಶಾಂತ್ ದೀರ್ಘಕಾಲದ ಹಿಮ್ಮಡಿ ನೋವಿನಿಂದಲೂ ಬಳಲುತ್ತಿರುವುದರಿಂದ ಅವರು 3ನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣವಾಗಿ ಫಿಟ್ ಆಗಿದ್ದರೆ ಎನ್ನುವ ಅನುಮಾನ ಕೂಡ ಕೇಳಿಬಂದಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ ಇಶಾಂತ್ ಪ್ರದರ್ಶನದ ಬಗ್ಗೆ ಮಾತನಾಡುವುದಕ್ಕೆ ತಿರಸ್ಕರಿಸಿದ್ದರು.
ಇನ್ನು 2 ಮತ್ತು 3ನೇ ಟೆಸ್ಟ್ನಲ್ಲಾಡಿರುವ ಇಶಾಂತ್ ಒಟ್ಟು 55 ಓವರ್ ಬೌಲಿಂಗ್ ಮಾಡಿದ್ದು ಕೇವಲ 5 ವಿಕೆಟ್ ಪಡೆದಿದ್ದಾರೆ. ಅಲ್ಲದೆ ವಿಶ್ವ ಚಾಂಪಿಯನ್ಶಿಪ್ ಫೈನಲ್ನಲ್ಲೂ ಇಶಾಂತ್ ಹೇಳಿಕೊಳ್ಳುವ ಪ್ರದರ್ಶನ ತೋರಿರಲಿಲ್ಲ.
ಇನ್ನು ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಗಾಯಕ್ಕೆ ಒಳಗಾಗಿ ಸ್ಕ್ಯಾನ್ಗೆ ಒಳಗಾಗಿದ್ದಾರೆ. ಆದರೆ ಇವರ ಸ್ಥಾನದಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 4ನೇ ಟೆಸ್ಟ್ನಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇಶಾಂತ್ ಜಾಗದಲ್ಲಿ ಉಮೇಶ್ ಯಾದವ್ ಅಥವಾ ಶಾರ್ದುಲ್ ಠಾಕೂರ್ ಅವಕಾಶ ಪಡೆಯಲಿದ್ದಾರೆ. ಬ್ಯಾಟಿಂಗ್ ಪರಿಗಣನೆಗೆ ತೆಗೆದುಕೊಂಡರೆ ಶಾರ್ದುಲ್ ಠಾಕೂರ್ ಉತ್ತಮ ಆಯ್ಕೆಯಾಗಬಹುದು. ಜೊತೆಗೆ ಸ್ವಿಂಗ್ ಮಾಡಲು ಕೂಡ ಮುಂಬೈ ಬೌಲರ್ ಶಕ್ತರಾಗಿದ್ದಾರೆ.
ಇದನ್ನು ಓದಿ:ಆಲ್ರೌಂಡರ್ ರವೀಂದ್ರ ಜಡೇಜಾ ಕಾಲಿಗೆ ಗಾಯ; ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೆ ದಾಖಲು