ಮುಂಬೈ: ಶ್ರೀಲಂಕಾ ವಿರುದ್ಧದ ಟಿ20 ಸರಣಿ ನಾಳೆಯಿಂದ ಆರಂಭವಾಗಲಿದೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಕಾಯಂ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಟಿ20ಗೆ ಕಾಯಂ ನಾಯಕನನ್ನಾಗಿ ಮಾಡಬೇಕು ಎಂಬ ಕೂಗು ಇದೆ. ಆದರೆ, ಇದಕ್ಕೆ ಮಾಜಿ ಕ್ರಿಕೆಟಿಗ, ಆಲ್ರೌಂಡರ್ ಇರ್ಫಾನ್ ಪಠಾಣ್ ತುಸು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಇರ್ಫಾನ್ ಪಠಾಣ್ ಮಾತನಾಡಿ, ಹಾರ್ದಿಕ್ ಪಾಂಡ್ಯ ಸದ್ಯದ ಭಾರತ ತಂಡದ ಸ್ಟಾರ್ ಆಲ್ರೌಂಡರ್ ಎಂಬುದನ್ನು ಒಪ್ಪಿಕೊಳ್ಳುವೆ. ಅವರ ಆಟ ನಿಜಕ್ಕೂ ಅದ್ಭುತ. ಅವರನ್ನು ಶ್ರೀಲಂಕಾ ಸರಣಿಗೆ ನಾಯಕರನ್ನಾಗಿ ಮಾಡಿದ್ದು ಉತ್ತಮವಾಗಿದೆ. ಆದರೆ, ಭವಿಷ್ಯದಲ್ಲಿ ಕಾಯಂ ನಾಯಕನನ್ನಾಗಿ ಮಾಡುವುದರ ಬಗ್ಗೆ ಆಯ್ಕೆ ಸಮಿತಿ ತುಸು ಯೋಚಿಸಬೇಕು ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಈ ಹಿಂದೆ ಸತತವಾಗಿ ಗಾಯಕ್ಕೆ ಒಳಗಾಗಿದ್ದಾರೆ. ಕಾಯಂ ನಾಯಕನನ್ನಾಗಿ ಘೋಷಿಸಿದಾಗ ಅವರು ಯಾವುದಾದರೂ ಸರಣಿಯ ವೇಳೆ ಗಾಯಗೊಂಡಲ್ಲಿ ಬದಲಿ ನಾಯಕನನ್ನು ಹುಡುಕಬೇಕಾಗುತ್ತದೆ. ಇದು ತಂಡದ ಮೇಲೆ ಪರಿಣಾಮ ಬೀರಲಿದೆ. ಸದ್ಯದ ಅವರ ದೈಹಿಕ ಸಾಮರ್ಥ್ಯವನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ತಂಡದ ನಾಯಕರಾಗಿ ರೋಹಿತ್ ಶರ್ಮಾ ಇದ್ದಾರೆ. ಅವರನ್ನು ಕೈಬಿಟ್ಟು ಹಾರ್ದಿಕ್ಗೆ ಪಟ್ಟ ಕಟ್ಟಿದಾಗ, ಗಾಯಗೊಂಡಲ್ಲಿ ಮತ್ತೆ ಹಳೆಯ ಕ್ಯಾಪ್ಟನ್ ಮೊರೆ ಹೋಗಬೇಕಾಗುತ್ತದೆ. ಇದು ತಂಡದ ಸಂಯೋಜನೆಯನ್ನು ಬುಡಮೇಲು ಮಾಡಲಿದೆ. ಹೀಗಾಗಿ ಹೊಸ ನಾಯಕನ ಘೋಷಣೆ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯ ಈ ಹಿಂದೆ ಬೆನ್ನು ನೋವಿಗೆ ಗುರಿಯಾಗಿ ಹಲವು ತಿಂಗಳು ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಅಲ್ಲದೇ, ಇದಕ್ಕೂ ಮೊದಲು ಅವರು ಸತತವಾಗಿ ಗಾಯಕ್ಕೊಳಗಾಗುತ್ತಿದ್ದರು. ಇದರಿಂದಾಗಿ ಬೌಲಿಂಗ್ ಮಾಡುವುದನ್ನೂ ಕೆಲ ಸಮಯ ನಿಲ್ಲಿಸಿದ್ದರು. ಇದು ಆಟಗಾರನ ಫಿಟ್ನೆಸ್ ಮೇಲೆ ಅನುಮಾನ ಮೂಡಿಸಿತ್ತು. ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಪಾಂಡ್ಯ ಅದ್ಭುತ್ ಕಮ್ಬ್ಯಾಕ್ ಮಾಡಿದ್ದಾರೆ.
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನೇತೃತ್ವ ವಹಿಸಿಕೊಂಡು ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಭಾರತ ತಂಡದ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿ ಯಶಸ್ಸು ಸಾಧಿಸಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಮೇಲೆ ಭರವಸೆ ಹೆಚ್ಚಾಗಿದೆ.
ಓದಿ: ವಿಶ್ವಕಪ್ಗೆ 20 ಜನರ ಶಾರ್ಟ್‌ಲಿಸ್ಟ್ ಸಿದ್ಧ, ರೋಹಿತ್ಗೆ ನಾಯಕತ್ವ ಮುಂದುವರಿಕೆ ಸಾಧ್ಯತೆ