ಶಾರ್ಜಾ (ದುಬೈ): ಕಳಪೆ ಫಾರ್ಮ್ನಿಂದಾಗಿ ಟೀಕೆಗೆ ಗುರಿಯಾಗಿದ್ದ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಇಶಾನ್ ಕಿಶನ್ ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಕೇವಲ 25 ಎಸೆತಗಳಲ್ಲಿ 5 ಬೌಂಡರಿ ಮತ್ತು ಭರ್ಜರಿ 3 ಸಿಕ್ಸರ್ಗಳ ನೆರವಿನಿಂದ ಅಜೇಯ 50 ರನ್ಗಳಿಸಿ ಕಳಪೆ ಫಾರ್ಮ್ ಟೀಕೆಗೆ ಉತ್ತರ ನೀಡಿದ್ದಾರೆ.
ಮುಂಬರುವ ಟಿ-20 ವಿಶ್ವಕಪ್ಗೆ ಆಯ್ಕೆಯಾಗಿರುವ ಇಶಾನ್ ಫಾರ್ಮ್ ಬಗ್ಗೆ ಚರ್ಚೆ ಆರಂಭವಾಗಿತ್ತು. ಜತೆಗೆ ಅವರ ಆಯ್ಕೆ ಕುರಿತಂತೆ ಟೀಕೆಗಳು ಕೇಳಿಬಂದಿದ್ದವು. ಹೀಗಾಗಿ ಕಿಶನ್ ಮತ್ತೆ ಫಾರ್ಮ್ಗೆ ಮರಳಲು ಕ್ರಿಕೆಟ್ ದಿಗ್ಗಜರ ಮೊರೆ ಹೋಗಿದ್ದರು. ಕಳೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 12 ಎಸೆತಗಳನ್ನು ಎದುರಿಸಿ ಕೇವಲ 9 ರನ್ಗಳಿಸಿ ಔಟ್ ಆಗಿದ್ದರು. ಪಂದ್ಯದ ಸೋಲಿನ ಬಳಿಕ ಆರ್ಸಿಬಿ ನಾಯಕ ವಿರಾಟ್ ಜೊತೆಯೂ ಮಾತುಕತೆಯಲ್ಲಿ ಮುಳುಗಿದ್ದರು.
ಇದಾದ ಬಳಿಕ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ, ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಜೊತೆಯೂ ಬ್ಯಾಟಿಂಗ್ ಕುರಿತ ಸಲಹೆ ಪಡೆದಿದ್ದರು. ಅಲ್ಲದೆ ಕಳಪೆ ಫಾರ್ಮ್ನಿಂದ ಕಳೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಕಿಶನ್ ಹೊರಗುಳಿಯಬೇಕಾಯಿತು.
ಆದರೆ ನಿನ್ನೆಯ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಬಲ ನೀಡಿದ್ದಾರೆ. ಈ ನಡುವೆ ಪಂದ್ಯದ ಬಳಿಕ ಮಾತನಾಡಿರುವ ಅವರು, 'ನಾನು ಈ ಬಗ್ಗೆ ಪೊಲಾರ್ಡ್ ಬಳಿ ಕೇಳಿದಾಗ ನೀನು ಕಳೆದ ಸೀಸನ್ನಲ್ಲಿ ಏನು ಮಾಡಿದೆ ಎಂದು ಸುಮ್ಮನೆ ನೋಡು ಎಂದಿದ್ದರು. ಅದರಂತೆ ನಾನು ನನ್ನ ಬ್ಯಾಟಿಂಗ್‌ನ ಕೆಲವು ಹಳೆಯ ವಿಡಿಯೋಗಳನ್ನು ನೋಡಿದೆ, ಅದು ನನಗೆ ಸ್ವಲ್ಪ ಆತ್ಮವಿಶ್ವಾಸವನ್ನು ನೀಡಿತು' ಎಂದಿದ್ದಾರೆ.
ಇದರ ಜೊತೆ ಕಳೆದ ಪಂದ್ಯದಲ್ಲಿ ಇಶಾನ್ ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದರೆ, ನಿನ್ನೆಯ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಜೊತೆ ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಿದ್ದರು.
ಇದನ್ನೂ ಓದಿ: ಕಿಶನ್ ಅಬ್ಬರದ ಅರ್ಧಶತಕ: ರಾಜಸ್ಥಾನ್ ವಿರುದ್ಧ ಮುಂಬೈಗೆ 8 ವಿಕೆಟ್ಗಳ ಜಯ, ಪ್ಲೇ ಆಫ್ ಆಸೆ ಜೀವಂತ