ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಪ್ರದರ್ಶಿಸುವ ಮೂಲಕ ಅಪರೂಪದ ದಾಖಲೆಯನ್ನೂ ಬರೆದಿದ್ದಾರೆ. ರನ್ ಮಷಿನ್ ಖ್ಯಾತಿಯ ಬ್ಯಾಟರ್ ಕೇವಲ 49 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಆರ್ಸಿಬಿ ಗೆಲುವಿಗೆ ಕಾರಣರಾದರು. ಈ ಅನುಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲಿ 50 ಬಾರಿ ಫಿಫ್ಟಿ ಪ್ಲಸ್ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಯೂ ಈಗ ಇವರದ್ದಾಗಿದೆ.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಇಬ್ಬರು ದೈತ್ಯ ಬ್ಯಾಟರ್‌ಗಳು ಮುಂಬೈ ವಿರುದ್ಧ ಜೊತೆಯಾಟದ ಹೊಸ ದಾಖಲೆ ಸೃಷ್ಟಿಸಿದರು. ಅಷ್ಟೇ ಅಲ್ಲ, ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದರು.
ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 45 ಅರ್ಧ ಶತಕ ಮತ್ತು 5 ಶತಕ ಸೇರಿದಂತೆ 50 ಪ್ಲಸ್ ಗಳಿಸಿದ ಮೊದಲನೇ ಭಾರತೀಯನೂ ಹೌದು. ಆಸೀಸ್ ಬ್ಯಾಟರ್ ಡೇವಿಡ್ ವಾರ್ನರ್ 60 ಫಿಫ್ಟಿ ಪ್ಲಸ್ಗಳೊಂದಿಗೆ ಮೊದಲನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪಂಜಾಬ್ ನಾಯಕ ಶಿಖರ್ ಧವನ್ 49 ಫಿಫ್ಟಿ ಪ್ಲಸ್ ದಾಖಲಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಆರೆಂಜ್, ಪರ್ಪಲ್ ಕ್ಯಾಪ್ ರೇಸ್: ಸದ್ಯ ಐಪಿಎಲ್‌ನಲ್ಲಿ ಐದು ಪಂದ್ಯಗಳು ನಡೆದಿವೆ. ಸಿಎಸ್‌ಕೆ ಆರಂಭಿಕ ರುತುರಾಜ್ ಗಾಯಕ್ವಾಡ್ 92 ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಬಳಿಕ ಮುಂಬೈ ಬ್ಯಾಟರ್ ತಿಲಕ್ ವರ್ಮಾ 84, ವಿರಾಟ್ ಕೊಹ್ಲಿ 82, ಕೈಲ್ ಮೇಯರ್ಸ್ 73 ಮತ್ತು ಫಾಫ್ ಡು ಪ್ಲೆಸಿಸ್ 73 ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ರೇಸ್ನ ಅಗ್ರ 5ನೇ ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮಾರ್ಕ್ ವುಡ್ 5 ವಿಕೆಟ್ ಮತ್ತು ರಾಜಸ್ಥಾನ್ ರಾಯಲ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ 4 ವಿಕೆಟ್ ಪಡೆದಿದ್ದು, ಬೌಲರ್‌ಗಳ ವಿಭಾಗದ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನ ಹೊಂದಿದ್ದಾರೆ.
ಆರ್ಸಿಬಿಗೆ ಭರ್ಜರಿ ಗೆಲುವು: ನಿನ್ನೆ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಮುಂಬೈ ವಿಕೆಟ್ಗಳ ಕುಸಿತದ ನಡುವೆಯೂ ಭರ್ಜರಿ ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್ಗಳಿಗೆ ಮುಂಬೈ ತಂಡ ಆರ್ಸಿಬಿಗೆ 172 ರನ್‌ಗಳ ಗುರಿ ನೀಡಿತು. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಅವರ ಅದ್ಭುತ ಇನ್ನಿಂಗ್ಸ್‌ನ ಫಲವಾಗಿ RCB ಸುಲಭವಾಗಿ ಮುಂಬೈ ನೀಡಿದ ಗುರಿ ತಲುಪಿತು. ಕೊಹ್ಲಿ, ಡುಪ್ಲೆಸಿಸ್ ಮುಂಬೈ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಅಂತಿಮವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ ರೂವಾರಿಗಳಾದರು.
ಇದನ್ನೂ ಓದಿ: IPL 2023 ಫಸ್ಟ್ ರೌಂಡ್: ಪಾಯಿಂಟ್ ಟೇಬಲ್ನಲ್ಲಿ ಆರ್ಸಿಬಿ ಎಲ್ಲಿದೆ? ಹೀಗಿದೆ ಚಿತ್ರಣ