ನವದೆಹಲಿ: ಐಸಿಸಿ ಟಿ -20 ವಿಶ್ವಕಪ್ ಟೂರ್ನಿಗೋಸ್ಕರ ಈಗಾಗಲೇ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಈ ತಂಡದಲ್ಲಿರುವ ಅನೇಕ ಪ್ರತಿಭೆಗಳು ಈಗಾಗಲೇ ಐಪಿಎಲ್ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿವೆ. ಆದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನ ಹಾಗೂ ವರುಣ್ ಚಕ್ರವರ್ತಿ ಗಾಯದ ಸಮಸ್ಯೆ ಇದೀಗ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿರುವ ಹಾರ್ದಿಕ್ ಪಾಂಡ್ಯ ಬ್ಯಾಟ್ನಿಂದ ರನ್ ಹರಿದು ಬರುತ್ತಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಗಾಯದ ಸಮಸ್ಯೆಗೊಳಗಾಗಿದ್ದು, ಮಂಡಿನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾ ವಿಶ್ವಕಪ್ ತಂಡಕ್ಕೆ ಮಾರ್ಗದರ್ಶಕರಾಗಿ ಆಯ್ಕೆಯಾಗಿರುವ ಮಹೇಂದ್ರ ಸಿಂಗ್ ಧೋನಿ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ.
ವಿಶ್ವಕಪ್ಗಾಗಿ ಘೋಷಣೆಯಾಗಿರುವ ತಂಡಗಳಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 10ರವರೆಗೆ ಸಮಯವಕಾಶ ನೀಡಲಾಗಿದ್ದು, ಗಾಯಗೊಂಡಿರುವ ವರುಣ್ ಚಕ್ರವರ್ತಿ ಹಾಗೂ ಕಳಪೆ ಪ್ರದರ್ಶನ ನೀಡುತ್ತಿರುವ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಬೇರೆ ಆಟಗಾರರ ಆಯ್ಕೆ ಮಾಡುವ ಮಾತುಗಳು ಸಹ ಕೇಳಿ ಬರುತ್ತಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇಂದು ಮಹತ್ವದ ಸಭೆ ನಡೆಸಲಿದ್ದು, ನಿರ್ಧಾರ ಕೂಡ ಹೊರಬೀಳುವ ಸಾಧ್ಯತೆ ಇದೆ.
ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರ ಪ್ರದರ್ಶನದ ಬಗ್ಗೆ ಇದೀಗ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕೋಚ್ ರವಿಶಾಸ್ತ್ರಿ ಹಾಗೂ ಮಾರ್ಗದರ್ಶಕರಾಗಿರುವ ಎಂ.ಎಸ್ ಧೋನಿ ಚರ್ಚೆ ನಡೆಸುವ ಸಾಧ್ಯತೆ ಇದೆ. ವರುಣ್ ಚಕ್ರವರ್ತಿ ಕೇವಲ 4 ಓವರ್ ಮಾಡುವ ಕಾರಣ ಅವರು ಹೆಚ್ಚಿನ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇಲ್ಲ.
ಆದರೆ, ಮ್ಯಾಚ್ ವಿನ್ನರ್, ಆಲ್ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಪ್ರದರ್ಶನ ಇದೀಗ ನಿರ್ಣಾಯಕವಾಗಿದ್ದು, ಅವರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಮಹೇಂದ್ರ ಸಿಂಗ್ ಧೋನಿ ನೀಡುವ ಮಾರ್ಗದರ್ಶನ ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಹಾರ್ದಿಕ್, ಇಲ್ಲಿಯವರೆಗೆ ಬೌಲಿಂಗ್ ಮಾಡಿಲ್ಲ. ಆದರೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಂದಿನ ವಾರದಿಂದ ಅವರು ಬೌಲ್ ಮಾಡಬಹುದು ಎಂಬ ಮಾತು ಕೇಳಿ ಬಂದಿವೆ.
ತಂಡಕ್ಕೆ ಇಷ್ಟು ದಿನ ದೊಡ್ಡ ತಲೆನೋವಾಗಿದ್ದ ಸೂರ್ಯಕುಮಾರ್ ಯಾದವ್ ಹಾಗೂ ಇಶನ್ ಕಿಶನ್ ಸದ್ಯ ಲಯ ಕಂಡುಕೊಂಡಿದ್ದು, ತಂಡಕ್ಕೆ ಮತ್ತಷ್ಟು ಶಕ್ತಿ ನೀಡಿದೆ.