ಮುಂಬೈ: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಆಘಾತದ ಹೊರತಾಗಿಯೂ ರಾಹುಲ್ ತ್ರಿಪಾಠಿ 76 ರನ್ ಮತ್ತು ಪ್ರಿಯಂ ಗರ್ಗ್ ಅವರ 42 ರನ್‌ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ಗಳಿಕೆ ಮಾಡಿತು. ಈ ಗುರಿ ಬೆನ್ನತ್ತಿದ್ದ ಮುಂಬೈ ತಂಡ ಕೊನೆಯಲ್ಲಿ ಎಡವಿಬಿದ್ದು 3 ರನ್ಗಳಿಂದ ಸೋಲು ಕಂಡಿದೆ.
ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ತಂಡದ ಪರ ಅಭಿಷೇಕ್ ಶರ್ಮಾ 9 ರನ್ ಗಳಿಸಿ ಬೇಗನೇ ಔಟಾದರು. ಈ ವೇಳೆ ಕ್ರೀಸಿನಲ್ಲಿ ಒಂದಾದ ಗರ್ಗ್ ಹಾಗೂ ತ್ರಿಪಾಠಿ ಎದುರಾಳಿ ಬೌಲರ್ಗಳನ್ನು ದಂಡಿಸಿದರು. ಈ ಜೋಡಿ 80ಕ್ಕೂ ಅಧಿಕ ರನ್‌ಗಳ ಜೊತೆಯಾಟವಾಡಿತು.
ಇದನ್ನೂ ಓದಿ: ಪ್ಲೇ-ಆಫ್ಗೋಸ್ಕರ ಮುಂದುವರೆದ ಜಿದ್ದಾಜಿದ್ದಿ ಫೈಟ್... 3 ಸ್ಥಾನಕ್ಕಾಗಿ 7 ತಂಡಗಳ ಹೋರಾಟ!
ಕೇವಲ 26 ಎಸೆತಗಳಲ್ಲಿ 42 ರನ್ಗಳಿಕೆ ಮಾಡಿದ್ದ ಗರ್ಗ್, ರಮಣದೀಪ್ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಜೊತೆಯಾದ ಪೂರನ್ ಕೂಡ ಅಬ್ಬರಿಸಿ 22 ಎಸೆತಗಳಲ್ಲಿ 38 ರನ್ ಕಲೆ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ತ್ರಿಪಾಠಿ 44 ಎಸೆತಗಳಲ್ಲಿ 76 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಮರ್ಕ್ರಾಮ್ 2ರನ್ಗಳಿಸಿ ಔಟಾದರೆ, ವಿಲಿಯಮ್ಸನ್ ಅಜೇಯ 8ರನ್, ವಾಷಿಂಗ್ಟನ್ ಸುಂದರ್ 9 ರನ್ಗಳಿಸಿ ಬುಮ್ರಾಗೆ ವಿಕೆಟ್ ನೀಡಿದರು. ಮುಂಬೈ ಪರ ರಮಣದೀಪ್ ಸಿಂಗ್ 3, ಡೆನಿಯಲ್ ಸ್ಯಾಮ್ಸ್, ಮೆರ್ಡಿತ್ ಮತ್ತು ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: 194 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಮುಂಬೈ, ನಾಯಕ ರೋಹಿತ್ ಶರ್ಮಾ 48 ರನ್, ಇಶಾನ್ ಕಿಶನ್ 43 ರನ್ ಮತ್ತು ಟಿಮ್ ಡೇವಿಡ್ 46 ರನ್ ಗಳಿಸಿ ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ ಜಯದತ್ತ ಮುನ್ನಡೆಯುತ್ತಿತ್ತು. ಆದರೆ, 19ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಪಡೆಯುವುದರ ಜೊತೆಗೆ ಮೇಡನ್ ಓವರ್ ಎಸೆದು ಮುಂಬೈ ಇಂಡಿಯನ್ಸ್ ಗೆಲುವಿನ ದಿಕ್ಕು ಬದಲಿಸಿದರು.
ಕೊನೆಯ ಓವರ್‌ನಲ್ಲಿ ಮುಂಬೈ ತಂಡಕ್ಕೆ ಗೆಲ್ಲಲು 19 ರನ್ಗಳು ಬೇಕಿದ್ದವು. ಆದ್ರೆ ಮುಂಬೈ ತಂಡಕ್ಕೆ ಕೇವಲ 15 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಅಂತಿಮವಾಗಿ 20 ಓವರ್ಗಳಿಗೆ 7 ವಿಕೆಟ್ಗಳನ್ನು ಕಳೆದುಕೊಂಡು 190 ರನ್ ಕಲೆಹಾಕಿ 3 ರನ್ ಅಂತರದಲ್ಲಿ ಸೋಲು ಅನುಭವಿಸಿತು. ಸನ್‌ರೈಸರ್ಸ್ ಪರ ಉಮ್ರಾನ್ ಮಲಿಕ್ 3 ವಿಕೆಟ್ ಪಡೆದ್ರೆ, ವಾಷಿಂಗ್ಟನ್ ಸುಂದರ್ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಈ ಜಯದೊಂದಿಗೆ ಸನ್‌ರೈಸರ್ಸ್ ಒಟ್ಟು 12 ಅಂಕಗಳನ್ನು ಕಲೆಹಾಕಿ ಪಾಯಿಂಟ್ ಟೇಬಲ್ನಲ್ಲಿ 8ನೇ ಸ್ಥಾನ ಅಲಂಕರಿಸಿದೆ. ತಂಡಕ್ಕೆ ಇನ್ನೊಂದು ಪಂದ್ಯ ಬಾಕಿಯಿದ್ದು ಅದನ್ನೂ ಗೆದ್ದರೆ 14 ಅಂಕಗಳೊಂದಿಗೆ ಪ್ಲೇ-ಆಫ್ ತಲುಪಲು ಉಳಿದ ತಂಡಗಳ ಫಲಿತಾಂಶವನ್ನು ಕಾದುನೋಡಬೇಕಿದೆ.