ಮೊಹಾಲಿ (ಪಂಜಾಬ್): ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರರ್ದಶಿಸಿದ ಮುಂಬೈ ಇಂಡಿಯನ್ಸ್ ತಂಡ ಆರು ವಿಕೆಟ್ಗಳ ಗೆಲುವು ಸಾಧಿಸಿದೆ. ಪಂಜಾಬ್ ನೀಡಿದ್ದ 215 ರನ್ಗಳ ಬೃಹತ್ ಗುರಿಯನ್ನು ರೋಹಿತ್ ಶರ್ಮಾ ಪಡೆ ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ಚೇಸ್ ಮಾಡಿ ಜಯದ ಕೇಕೆ ಹಾಕಿದೆ.
ಇಲ್ಲಿನ ಐಎಸ್ ಬಿಂದ್ರಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕೇವಲ ಮೂರು ವಿಕೆಟ್ ಕಳೆದುಕೊಂಡು 214 ರನ್ಗಳನ್ನು ಕಲೆ ಹಾಕಿತ್ತು. ಈ ದೊಡ್ಡ ಮೊತ್ತವನ್ನು ಮುಂಬೈ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅಬ್ಬರ ಮತ್ತು ಕೊನೆಯ ಹಂತದಲ್ಲಿ ತಿಲಕ್ ವರ್ಮಾ, ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ನಿಂದ ಗೆಲುವಿನ ದಡ ತಲುಪಿತು.
ಮುಂಬೈ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ (0) ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಗಿತ್ತು. ಆದರೆ, ಇಶಾನ್ ಕಿಶನ್ ಹಾಗೂ ಕ್ಯಾಮರೂನ್ ಗ್ರೀನ್ ಅರ್ಧಶತಕದ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 18 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ ಕ್ಯಾಮರೂನ್ ಗ್ರೀನ್ 23 ರನ್ ಸಿಡಿಸಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಮೂರನೇ ವಿಕೆಟ್ಗೆ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ 116 ರನ್ಗಳ ಜೊತೆಯಾಟ ನೀಡಿದರು. ಇಬ್ಬರು ಬ್ಯಾಟರ್ಗಳು ಪಂಜಾಬ್ ಬೌಲರ್ಗಳ ಬೆವರಿಸಿ ಆಕರ್ಷಕ ಅರ್ಧಶತಕಗಳನ್ನು ಸಿಡಿಸಿದರು. 31 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಎರಡು ಸಿಕ್ಸರ್ ಮತ್ತು ಎಂಟು ಬೌಂಡರಿಯೊಂದಿಗೆ 66 ರನ್ ಸಿಡಿಸಿ ನಿರ್ಗಮಿಸಿದರು. ಮತ್ತೊಂದೆಡೆ, ಇಶಾನ್ ಕಿಶನ್ 41 ಎಸೆತದಲ್ಲಿ ನಾಲ್ಕು ಸಿಕ್ಸರ್, ಏಳು ಬೌಂಡರಿಗಳ ಸಮೇತ 75 ರನ್ ಬಾರಿಸಿ ಔಟಾದರು. ಈ ಹಂತದಲ್ಲಿ ಟಿಮ್ ಡೇವಿಡ್ ಹಾಗೂ ತಿಲಕ್ ವರ್ಮಾ ಅಜೇಯ ಆಟವಾಡಿದರು. 10 ಬಾಲ್ಗಳಲ್ಲಿ ಮೂರು ಭರ್ಜರಿ ಸಿಕ್ಸರ್, ಒಂದು ಬೌಂಡರಿಯೊಂದಿಗೆ ತಿಲಕ್ 26 ರನ್ ಸಿಡಿಸಿದರೆ, ಡೇವಿಡ್ 10 ಎಸೆತದಲ್ಲಿ ಮೂರು ಬೌಂಡರಿ ಸಮೇತ 19 ರನ್ ಬಾರಿಸಿದರು. ಈ ಮೂಲಕ ಮುಂಬೈ 18.5 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.
ಲಿವಿಂಗ್‌ಸ್ಟೋನ್ ಆಟ ವ್ಯರ್ಥ: ಇದಕ್ಕೂ ಮುನ್ನ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ಮೂರು ವಿಕೆಟ್ ನಷ್ಟಕ್ಕೆ 214 ರನ್ ಕಲೆ ಹಾಕಿತ್ತು. ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಲಿಯಾಮ್ ಲಿವಿಂಗ್‌ಸ್ಟೋನ್ ಘರ್ಜಿಸಿದರು. ಲಿವಿಂಗ್‌ಸ್ಟೋನ್ 42 ಬಾಲ್ಗಳನ್ನು ಎದುರಿಸಿ ಏಳು ಬೌಂಡರಿ ಮತ್ತು ನಾಲ್ಕು ಸಿಕ್ಸರ್ನಿಂದ ಅಜೇಯರಾಗಿ 82 ರನ್ ಗಳಿಸಿದರು.
ಪಂಜಾಬ್ ಇನ್ನಿಂಗ್ಸ್ ಆರಂಭದಲ್ಲಿ 9 ರನ್ ಗಳಿಸಿದ್ದ ಪ್ರಭ್‌ಸಿಮ್ರಾನ್ ಸಿಂಗ್ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಶಿಖರ್ ಧವನ್ ಜೊತೆ ಸೇರಿಕೊಂಡ ಮ್ಯಾಥ್ಯೂ ಶಾರ್ಟ್ 40 ರನ್ ಜೊತೆಯಾಟ ನೀಡಿದರು. 30 ರನ್ ಗಳಿಸಿದ್ದ ಧವನ್ ನಿರ್ಗಮಿಸಿದರು. 27 ರನ್ ಮಾಡಿದ್ದ ಮ್ಯಾಥ್ಯೂ ಶಾರ್ಟ್ ಕೂಡಾ ಬೌಲ್ಡ್ ಆದರು. ನಂತರ ಬಂದ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ತಂಡಕ್ಕೆ ಉತ್ತಮ ರನ್ ಕಲೆ ಹಾಕಿದರು. ಈ ಜೋಡಿ ಬರೋಬ್ಬರಿ 100 ರನ್ ಜೊತೆಯಾಟ ಆಡಿತು. ಜಿತೇಶ್ ಶರ್ಮಾ 27 ಬಾಲ್ನಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಸಹಿತ ಅಜೇಯ 49 ರನ್ ಕೆಲೆ ಹಾಕಿದರು. ಇದರಿಂದ ಪಂಜಾಬ್ 214 ರನ್ ಪೇರಿಸಿತ್ತು.
ದುಬಾರಿಯಾದ ಮುಂಬೈ ಬೌಲರ್ಗಳು: ಅನನುಭವಿ ಅರ್ಷದ್ ಖಾನ್ 4 ಓವರ್ಗೆ 48 ಚಚ್ಚಿಸಿಕೊಂಡು ಒಂದು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ 4 ಓವರ್‌ಗಳಲ್ಲಿ ವಿಕೆಟ್ ರಹಿತ 56 ರನ್ ನೀಡಿದರು. ಪಿಯೂಷ್ ಚಾವ್ಲಾ 29 ರನ್ಗೆ ಎರಡು ವಿಕೆಟ್ ಕಬಳಿಸಿದರು. ಆಕಾಶ್ ಮಧ್ವಲ್ 3 ಓವರ್ಗೆ 37 ರನ್ ಬಿಟ್ಟುಕೊಟ್ಟರು.
ಇದನ್ನೂ ಓದಿ: LSG vs CSK: ಚೆನ್ನೈ-ಲಕ್ನೋ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ, ಓವರ್ ಕಡಿತಗೊಳಿಸಿದರೆ ಧೋನಿ ಪಡೆಗೆ ಗುರಿ ಎಷ್ಟು?