ಮಿಲಿಯನ್ ಡಾಲರ್ ಚುಟುಕು ಕ್ರಿಕೆಟ್ ಟೂರ್ನಿ ಎಂದೇ ಪ್ರಸಿದ್ಧಿ ಪಡೆದಿದರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರತಿಭೆಗಳ ಸಾಮರ್ಥ್ಯ ಪ್ರದರ್ಶನಕ್ಕೆ ಮಹತ್ವದ ವೇದಿಕೆ. ಈ ಲೀಗ್ನಿಂದ ಕ್ರಿಕೆಟ್ ಜಗತ್ತಿಗೆ ಪದಾರ್ಪಣೆ ಮಾಡಿದ ಅದೆಷ್ಟೋ ಆಟಗಾರರು ಇಂದು ಅಂತಾರಾಷ್ಟೀಯ ಮಟ್ಟದಲ್ಲಿ ಮಿಂಚು ಹರಿಸುತ್ತಿದ್ದಾರೆ. ಐಪಿಎಲ್ನಲ್ಲಿ ದೇಶಿ ಮತ್ತು ವಿದೇಶಿ ಆಟಗಾರರು ಒಟ್ಟಿಗೆ ಆಡುವುದರಿಂದ ಭಾರತದ ಯುವ ಪ್ರತಿಭೆಗಳ ಭವಿಷ್ಯ ನಿರ್ಣಯಕ್ಕೆ ವೇದಿಕೆಯೂ ಆಗಿದೆ.
ಚುಟುಕು ಕ್ರಿಕೆಟ್ ಟೂರ್ನಿಯಲ್ಲಿ ಶತಕ ಸಿಡಿಸಿ ಮೈಲಿಗಲ್ಲು ಸಾಧಿಸಿದ ಆಟಗಾರರು ಕಡಿಮೆ. ಅಂಥದ್ರಲ್ಲಿ ಆಟಗಾರರು ಸತತ ಎರಡು ಪಂದ್ಯಗಳಲ್ಲಿಯೂ ಶತಕ ಬಾರಿಸಿದ್ದು ಅಪರೂಪ. ಸತತ ಪಂದ್ಯಗಳಲ್ಲಿ ಶತಕಗಳನ್ನು ಸಿಡಿಸಿರುವ ಪಟ್ಟಿಗೆ ಸೇರಿರುವ ಆಟಗಾರರ ಮಾಹಿತಿ ಹೀಗಿದೆ..
ಶಿಖರ್ ಧವನ್: ಗಬ್ಬರ್ ಎಂದೇ ಪ್ರಸಿದ್ಧಿ ಪಡೆದಿರುವ ಆರಂಭಿಕ ಬ್ಯಾಟರ್ ಶಿಖರ್ ಧವನ್ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧವನ್ ಅವರು 2020 ರಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸಿ ಈ ಮೈಲಿಗಲ್ಲು ಸಾಧಿಸಿದ ಮೊದಲಿಗ ಬ್ಯಾಟರ್ ಎನಿಸಿಕೊಂಡಿದ್ದಾರೆ. 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಧವನ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದರು.
ಜಾಸ್ ಬಟ್ಲರ್: 2022 ರ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿದ್ದ ಜೋಸ್ ಬಟ್ಲರ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸತತ ಎರಡು ಶತಕ ಸಿಡಿಸಿ ಧವನ್ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರರಾಗಿದ್ದಾರೆ.
ವಿರಾಟ್ ಕೊಹ್ಲಿ: ರನ್ ಮಶೀನ್, ದಾಖಲೆಗಳ ಸರದಾರ ಎಂದೇ ಪ್ರಸಿದ್ಧಿ ಪಡೆದಿರುವ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸಿದ ಮೂರನೇ ಆಟಗಾರ. ಪ್ರಸಕ್ತ ಋತುವಿನಲ್ಲೇ ಕೊಹ್ಲಿ ಈ ಪಟ್ಟಿಗೆ ಸೇರಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ 65 ನೇ ಪಂದ್ಯದಲ್ಲಿ ಕೊಹ್ಲಿ ಮೊದಲ ಸೆಂಚುರಿ ಬಾರಿಸಿದ್ದರು. ಇದಾದ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಎರಡನೇ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿಯೂ ಶತಕ ಬಾರಿಸಿದ ಆಟಗಾರರಾಗಿದ್ದಾರೆ.
ಶುಭಮನ್ ಗಿಲ್: ಯುವ, ಆರಂಭಿಕ ಆಟಗಾರ ಪ್ರತಿಭಾವಂತ ಬ್ಯಾಟರ್ ಶುಭಮನ್ ಗಿಲ್ ಪ್ರಸಕ್ತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅಲ್ಲದೇ ಸತತ ಎರಡು ಶತಕಗಳನ್ನು ಬಾರಿಸುವ ಮೂಲಕ ದಾಖಲೆ ಬರೆದ ಯುವ ಅಟಗಾರ ಎಂಬ ಹೆಗ್ಗಳಿಕೆ ಇವರದ್ದು. 23 ವರ್ಷದ ಗಿಲ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಎರಡನೇ ಶತಕ ಬಾರಿಸಿದ್ದಾರೆ.
ಇದನ್ನೂ ಓದಿ: IPL ಪ್ಲೇಆಫ್‌ನ ಪ್ರತಿ ಡಾಟ್ ಬಾಲ್ಗೆ 500 ಸಸಿ: ಬಿಸಿಸಿಐನಿಂದ ಹಸಿರು ಸಂರಕ್ಷಣೆಯ ಮಹತ್ವದ ಯೋಜನೆ