ಇಂಡಿಯನ್ ಪ್ರೀಮಿಯರ್ ಲೀಗ್ ನ 33ನೇ ಪಂದ್ಯ ಮುಗಿದ ಬಳಿಕ ಪಾಯಿಂಟ್ಸ್ ಪಟ್ಟಿಯೊಂದಿಗೆ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ರೇಸ್ ರೋಚಕ ಹಂತ ತಲುಪುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಆರೆಂಜ್ ಕ್ಯಾಪ್ ರೇಸ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪಂಜಾಬ್ ಕಿಂಗ್ಸ್‌ನ ಅರ್ಷದೀಪ್ ಸಿಂಗ್ ಪರ್ಪಲ್ ಕ್ಯಾಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊಹಮ್ಮದ್ ಸಿರಾಜ್‌ಗೆ ಪೈಪೋಟಿ ನೀಡುತ್ತಿದ್ದಾರೆ.
ಐಪಿಎಲ್‌ನ 33 ನೇ ಪಂದ್ಯದ ಅಂತ್ಯದ ನಂತರ, ಹೆಚ್ಚಿನ ತಂಡಗಳು 7-7 ಪಂದ್ಯಗಳನ್ನು ಆಡುವ ಮೂಲಕ ಐಪಿಎಲ್‌ನಲ್ಲಿ ಅರ್ಧದಷ್ಟು ಪ್ರಯಾಣವನ್ನು ಪೂರ್ಣಗೊಳಿಸಿವೆ. ಕೇವಲ 4 ತಂಡಗಳು ಇದುವರೆಗೆ ಆರು ಪಂದ್ಯಗಳನ್ನು ಮಾತ್ರ ಆಡಿವೆ. 33ನೇ ಪಂದ್ಯದಲ್ಲಿ ಚೆನ್ನೈ ತಂಡ ಕೆಕೆಆರ್ನ್ನು ಮಣಿಸಿ 7 ಪಂದ್ಯದಲ್ಲಿ 5 ಗೆದ್ದು 10 ಅಂಕದಿಂದ ಅಗ್ರಸ್ಥಾನಕ್ಕೇರಿದೆ. 32ನೇ ಪಂದ್ಯದಲ್ಲಿ ಆರ್ಸಿಬಿ ರಾಜಸ್ಥಾನ ರಾಯಲ್ಸ್ನ್ನು ಮಣಿಸಿ 4 ಪಂದ್ಯದ ಗೆಲುವಿನಿಂದ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. 8 ಅಂಕ ಗಳಿಸಿದ 5 ತಂಡಗಳಿದ್ದು ಕ್ವಾಲಿಫೈಗೆ ಫೈಟ್ ಜೋರಾಗಿ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು ವಿರುದ್ಧ ಸೋಲನುಭವಿಸಿದ ರಾಜಸ್ಥಾನ ರಾಯಲ್ಸ್ (2ನೇ ಸ್ಥಾನ), ಲಕ್ನೋ ಸೂಪರ್ ಜೈಂಟ್ಸ್ (3ನೇ ಸ್ಥಾನ), ಪಂಜಾಬ್ ಕಿಂಗ್ಸ್ (6ನೇ ಸ್ಥಾನ) 7 ಪಂದ್ಯದಲ್ಲಿ 4ನ್ನು ಗೆದ್ದಿದ್ದರೆ, ಗುಜರಾತ್ ಟೈಟಾನ್ಸ್ (4ನೇ ಸ್ಥಾನ) 6 ರಲ್ಲಿ 4ನ್ನು ಗೆದ್ದು 8 ಅಂಕಗಳನ್ನು ಪಡೆದುಕೊಂಡಿದೆ. ಮುಂಬೈ ಇಂಡಿಯನ್ಸ್ (7ನೇ ಸ್ಥಾನ) 7 ಪಂದ್ಯದಲ್ಲಿ 3 ರನ್ನು ಗೆದ್ದು 6 ಅಂಕ ಹೊಂದಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ಚೆನ್ನೈ ವಿರುದ್ಧದ ಸೋಲಿನ ನಂತರ 7 ರಲ್ಲಿ 2 ಗೆದ್ದು 4 ಅಂಕಗಳಿಂದ 8ನೇ ಸ್ಥಾನದಲ್ಲಿದೆ. ಕೊನೆಯ 9 ಮತ್ತು ಹತ್ತನೇ ಸ್ಥಾನದಲ್ಲಿ ಕ್ರಮವಾಗಿ ಎರಡು ಪಂದ್ಯ ಗೆದ್ದ ಸನ್ ರೈಸರ್ಸ್ ಮತ್ತು ಒಂದೇ ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಇದೆ.
ಆರೆಂಜ್ ಕ್ಯಾಪ್ ರೇಸ್: ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ 7 ಪಂದ್ಯಗಳಲ್ಲಿ 405 ರನ್ ಗಳಿಸುವ ಮೂಲಕ ಮುನ್ನಡೆಯಲ್ಲಿದ್ದಾರೆ. 7 ಪಂದ್ಯಗಳಲ್ಲಿ 314 ರನ್ ಗಳಿಸಿರುವ ಡೆವೊನ್ ಕಾನ್ವೇ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ 285 ರನ್ ಗಳಿಸಿರುವ ಡೇವಿಡ್ ವಾರ್ನರ್ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ವಿರಾಟ್ ಮತ್ತು ಐದರಲ್ಲಿ ರುತುರಾಜ್ ಗಾಯಕ್ವಾಡ್ ಇದ್ದಾರೆ. ಮೊದಲ ಮೂರು ಸ್ಥಾನದಲ್ಲಿ ವಿದೇಶಿ ಆಟಗಾರರು ಸ್ಪರ್ಧೆಯಲ್ಲಿದ್ದಾರೆ.
ಪರ್ಪಲ್ ಕ್ಯಾಪ್ ರೇಸ್: ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ 7 ಪಂದ್ಯಗಳಲ್ಲಿ 13 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ 13 ವಿಕೆಟ್ ಪಡೆಯುವ ಮೂಲಕ ಅವರಿಗೆ ಕಠಿಣ ಹೋರಾಟ ನೀಡುತ್ತಿದ್ದಾರೆ. ರಶೀದ್ ಖಾಸ್ 6 ಪಂದ್ಯಗಳಲ್ಲಿ 12 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನೂ ಅರ್ಧದಷ್ಟು ಟೂರ್ನಮೆಂಟ್ ಬಾಕಿ ಇರುವುದರಿಂದ ಈ ಎಲ್ಲಾ ಪಟ್ಟಿಗಳು ಅಡಿಮೇಲಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: SRH vs DC: ಗೆಲುವಿನ ಲಯ ಮುಂದುವರೆಸುತ್ತಾ ಡೆಲ್ಲಿ?: ಉಭಯ ತಂಡಗಳಿಗೆ ಜಯ ಅನಿವಾರ್ಯ