ಲಕ್ನೋ(ಉತ್ತರ ಪ್ರದೇಶ): ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಇಂದು ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದೆ. ತವರಿನಲ್ಲಿ ಸೋಲು ಕಂಡಿದ್ದ ಸನ್ ರೈಸರ್ಸ್ ಲಕ್ನೋ ಪಿಚ್ನಲ್ಲಿ ಗೆಲುವು ಹುಡುಕುತ್ತಿದೆ. ಸನ್ ರೈಸರ್ಸ್ ನಾಯಕ ಐಡೆನ್ ಮಾರ್ಕ್ರಾಮ್ ತಂಡಕ್ಕೆ ಮರಳಿದ್ದಾರೆ.
ಉಭಯ ತಂಡಗಳಲ್ಲಿ ಬದಲಾವಣೆ ಆಗಿದ್ದು, ಲಕ್ನೋದಲ್ಲಿ ಮಾರ್ಕ್ ವುಡ್, ಅವೇಶ್ ಖಾನ್ ಬದಲಿಗೆ ಜಯದೇವ್ ಉನದ್ಕತ್ ಮತ್ತು ಅಮಿತ್ ಮಿಶ್ರಾ ಆಡುತ್ತಿದ್ದಾರೆ. ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ ಅವರನ್ನು ಹೈದರಾಬಾದ್ ಕೈ ಬಿಟ್ಟಿದೆ.
ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ 10ನೇ ಪಂದ್ಯ ನಡೆಯುತ್ತಿದೆ. ಲಕ್ನೊಗೆ ಇದು ಮೂರನೇ ಪಂದ್ಯವಾಗಿದ್ದು, ಕಳೆದೆರಡರ ಪೈಕಿ ಒಂದರಲ್ಲಿ ಗೆದ್ದು, ಒಂದು ಸೋಲನುಭವಿಸಿದೆ. ತವರಿನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 50 ರನ್ಗಳ ಗೆಲುವು ದಾಖಲಿಸಿತ್ತು. ಚೆನ್ನೈ ವಿರುದ್ಧದ ಎರಡನೇ ಪಂದ್ಯದಲ್ಲಿ ಹೋರಾಡಿ 12 ರನ್ನಿಂದ ಸೋಲನುಭವಿಸಿತ್ತು.
ಇಂದು ಮತ್ತೆ ತವರು ನೆಲದಲ್ಲಿ ರಾಹುಲ್ ಹುಡುಗರು ಕಣಕ್ಕಿಳಿಯುತ್ತಿದ್ದು ಮೊದಲ ಪಂದ್ಯದ ಗೆಲುವನ್ನು ಮತ್ತೆ ಇಲ್ಲಿ ಮರುಕಳಿಸಲು ಹಂಬಲಿಸುತ್ತಿದ್ದಾರೆ. ಆರಂಭಿಕರಾಗಿ ಕೈಲ್ ಮೇಯರ್ಸ್ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದು, ರಾಹುಲ್ ಇನ್ನೂ ಲಯ ಕಂಡುಕೊಂಡಿಲ್ಲ. ಬೌಲಿಂಗ್ನಲ್ಲಿ ಮಾರ್ಕ ವುಡ್ ಉತ್ತಮ ವಿಕೆಟ್ ಟೇಕರ್ ಆಗಿ ತಂಡಕ್ಕೆ ಬಲವಾಗಿದ್ದಾರೆ.
ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ರಾಜಸ್ಥಾನ ರಾಯಲ್ಸ್ ವಿರುದ್ಧ 72 ರನ್ನಿಂದ ಸೋಲು ಕಂಡಿದ್ದ ಭುವನೇಶ್ವರ್ ಕುಮಾರ್ ತಂಡ, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇಂದು ಪ್ರವಾಸಿ ಪಿಚ್ನಲ್ಲಿ ಗೆಲುವಿಗಾಗಿ ಎದುರು ನೋಡುತ್ತಿದೆ.
ತಂಡಗಳು ಇಂತಿವೆ..: ಸನ್ ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅನ್ಮೋಲ್ಪ್ರೀತ್ ಸಿಂಗ್(ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್(ನಾಯಕ), ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್, ಆದಿಲ್ ರಶೀದ್
ಪ್ರಭಾವಿ ಆಟಗಾರರು: ಹೆನ್ರಿಚ್ ಕ್ಲಾಸೆನ್, ಫಜಲ್ಹಕ್ ಫಾರೂಕಿ, ಮಯಾಂಕ್ ಮಾರ್ಕಾಂಡೆ, ಮಯಾಂಕ್ ದಾಗರ್, ಮಾರ್ಕೊ ಜಾನ್ಸೆನ್
ಲಕ್ನೋ ಸೂಪರ್ ಜೈಂಟ್ಸ್ : ಕೆಎಲ್ ರಾಹುಲ್(ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್(ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಅಮಿತ್ ಮಿಶ್ರಾ, ಯಶ್ ಠಾಕೂರ್, ಜಯದೇವ್ ಉನದ್ಕತ್, ರವಿ ಬಿಷ್ಣೋಯ್
ಪ್ರಭಾವಿ ಆಟಗಾರರು: ಆಯುಷ್ ಬಡೋನಿ, ಸ್ವಪ್ನಿಲ್ ಸಿಂಗ್, ಡೇನಿಯಲ್ ಸಾಮ್ಸ್, ಪ್ರೇರಕ್ ಮಂಕಡ್, ಅವೇಶ್ ಖಾನ್
ಇದನ್ನೂ ಓದಿ: ಸುಯಾಶ್ ಹೋರಾಟ ಮನೋಭಾವದ ಮುಂದೆ ಅನುಭವ ಅಮುಖ್ಯ: ಕೆಕೆಆರ್ ಕೋಚ್