ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ ಒಂದು ರನ್ನಿಂದ ರೋಚಕ ಜಯ ದಾಖಲಿಸಿದ ಲಖನೌ ಸೂಪರ್ ಜೈಂಟ್ಸ್ ತಂಡ ಐಪಿಎಲ್ ಟೂರ್ನಿಯ ಪ್ಲೇ ಆಫ್ ಎಂಟ್ರಿಯನ್ನು ಖಚಿತ ಪಡಿಸಿಕೊಂಡಿದೆ. ಎಲ್ಎಸ್ಜಿ ನೀಡಿದ್ದ 177 ರನ್ ಗೆಲುವಿನ ಗುರಿ ಬೆನ್ನಟ್ಟಿದ್ದ ಕೆಕೆಆರ್ ರಿಂಕು ಸಿಂಗ್ ವೀರೋಚಿತ ಹೋರಾಟ ನಡುವೆಯೂ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆ ಹಾಕಿ ಸೋಲೊಪ್ಪಿಕೊಂಡಿತ್ತು.
ಇಲ್ಲಿನ ಈಡನ್ ಗಾರ್ಡನ್ನಲ್ಲಿ ಪಂದ್ಯದಲ್ಲಿ ಲಖನೌ ತಂಡ ನೀಡಿದ್ದ ಟಾರ್ಗೆಟ್ ಬೆನ್ನಟ್ಟಿದ್ದ ಕೋಲ್ಕತ್ತಾ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ಆರಂಭಿಕರಾದ ಜೇಸನ್ ರಾಯ್ ಮತ್ತು ವೆಂಕಟೇಶ್ ಅಯ್ಯರ್ 61 ರನ್‌ಗಳ ಜೊತೆಯಾಟ ನೀಡಿದರು. ಆದರೆ, ಉತ್ತಮವಾಗಿ ಬ್ಯಾಟ್ ಬೀಸಿಸುತ್ತಿದ್ದ ಅಯ್ಯರ್ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ರಾಣಾ ಕೇವಲ 8 ರನ್ ಗಳಿಸಿ ಬೇಗ ನಿರ್ಗಮಿಸಿದರು. ಇದಾದ ಸ್ವಲ್ಪ ಹೊತ್ತಲ್ಲೇ 45 ರನ್ ಬಾರಿಸಿದ್ದ ಜೇಸನ್ ರಾಯ್ ವಿಕೆಟ್ ಒಪ್ಪಿಸಿದರು. ರಹಮಾನುಲ್ಲಾ ಗುರ್ಬಾಜ್ 10 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಆಂಡ್ರೆ ರಸೆಲ್ 7 ರನ್, ಶಾರ್ದೂಲ್ ಠಾಕೂರ್ 3 ರನ್ ಮತ್ತು ಸುನೀಲ್ ನರೈನ್ ಕೇವಲ 1 ರನ್ಗೆ ಓಟಾದರು.
ಆದರೆ, ನಿರಂತರವಾಗಿ ವಿಕೆಟ್ ಉರುಳುತ್ತಿದ್ದರೂ ರಿಂಕು ಸಿಂಗ್ ಅಬ್ಬರದ ಬ್ಯಾಟಿಂಗ್ ಪ್ರರ್ದಶಿಸಿದರು. ತಂಡದ ಗೆಲುವಿಗೆ ಕೊನೆಯ ಎರಡು ಓವರ್‌ಗಳಲ್ಲಿ 41 ರನ್‌ಗಳ ಅಗತ್ಯವಿದ್ದಾಗ ರಿಂಕು ಸ್ಪೋಟಕ ಬ್ಯಾಟಿಂಗ್ ಮಾಡಿದರು. 19ನೇ ಓವರ್‌ನಲ್ಲಿ ಹ್ಯಾಟ್ರಿಕ್ ಬೌಂಡರಿ, ಒಂದು ಸಿಕ್ಸರ್ ಮೂಲಕ ರಿಂಕು ಭರ್ಜರಿ 20 ರನ್ ಸಿಡಿಸಿದರು. ಕೊನೆಯ ಓವರ್‌ನಲ್ಲಿ ವಿಜಯಕ್ಕೆ 21 ರನ್‌ಗಳ ಅಗತ್ಯವಿತ್ತು. ಆಗಲೂ ಸಹ ರಿಂಕು ಸಿಂಗ್ ಅಬ್ಬರಿಸಿದರು. ಕೊನೆಯ ಮೂರು ಎಸೆತಗಳಲ್ಲಿ ಎರಡು ಸಿಕ್ಸರ್, ಒಂದು ಬೌಂಡರಿ ಬಾರಿಸಿದರು. ಆದರೆ, ಇದಕ್ಕೂ ಮೊದಲು ಎರಡು ಎಸತೆಗಳಲ್ಲಿ ರನ್ ಗಳಿಸಲು ಆಗಲಿಲ್ಲ. ಈ ಓವರ್‌ನಲ್ಲಿ 19 ರನ್ ಮಾತ್ರ ಬಂದವು. ಇದರಿಂದ ಸೋಲೊಪ್ಪಿಕೊಳ್ಳಬೇಕಾಯಿತು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ಆಂಭಿಕ ಆಘಾತ ಎದುರಿಸಿತು. ದೀಪಕ್ ಹೂಡಾ ಬದಲಾಗಿ ಆರಂಭಿಕರಾಗಿ ಕಣಕ್ಕಿಳಿದ ಕರಣ್ ಶರ್ಮಾ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕ್ವಿಂಟನ್ ಡಿ ಕಾಕ್ ಜೊತೆಗೂಡಿದ ಬಂದ ಪ್ರೇರಕ್ ಮಂಕಡ್ ಕೊಂಚ ಉತ್ತಮವಾಗಿ ಬ್ಯಾಟ್ ಬೀಸಿದರು. ಈ ಜೋಡಿ 3ನೇ ವಿಕೆಟ್ಗೆ 41 ರನ್ ಜೊತೆಯಾಟ ನೀಡಿತು. ಆದರೆ, 26 ರನ್ ಗಳಿಸಿ ಪ್ರೇಕ್ ಮಂಕಡ್ ನಿರ್ಗಮಿಸಿದರು.
ನಂತರ ಬಂದ ಮಾರ್ಕಸ್ ಸ್ಟೋಯ್ನಿಸ್ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ನಾಯಕ ಕೃನಾಲ್ ಪಾಂಡ್ಯ ಸಹ ಕೇವಲ 9 ರನ್ ಗಳಿಸಿ ಔಟಾದರು. ಇದರ ಬೆನ್ನಲ್ಲೇ 28 ರನ್ ಬಾರಿಸಿದ್ದ ಡಿ ಕಾಕ್ ಕೂಡಾ ವಿಕೆಟ್ ಒಪ್ಪಿಸಿದರು. ಈ ನಡುವೆ 6ನೇ ವಿಕೆಟ್ ಒಂದಾದ ಆಯುಷ್ ಬದೋನಿ ಮತ್ತು ಪೂರನ್ 74 ರನ್ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು. ಬದೋನಿ ತಾಳ್ಮೆಯ ಆಟಕ್ಕೆ ಮೊರೆ ಹೋದರೆ, ಪೂರನ್ ತಮ್ಮ ಹೊಡಿಬಡಿ ಆಟವನ್ನೇ ಪ್ರರ್ದಶಿಸಿದರು. ಆದರೆ, 21 ಬಾಲ್ನಲ್ಲಿ 25 ರನ್ ಗಳಿಸಿ ಬದೋನಿ ನಿರ್ಗಮಿಸಿದರು. ಪೂರನ್ ಅರ್ಧಶತಕ ಬಾರಿಸಿ ಮಿಂಚಿಸಿದರು. 30 ಎಸತೆಗಳನ್ನು ಐದು ಸಿಕ್ಸರ್ ಮತ್ತು ನಾಲ್ಕು ಬೌಂಡರಿಯ ಸಮೇತ 58 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇವರ ನಂತರ ಬಂದ ರವಿ ಬಿಷ್ಣೋಯ್ ಎರಡು ರನ್ಗೆ ಔಟಾದರು. ಕೃಷ್ಣಪ್ಪ ಗೌತಮ್ 11 ರನ್ ಮತ್ತು ನವೀನ್-ಉಲ್-ಹಕ್ 2 ರನ್ ನೆರವಿನಿಂದ ಅಂತಿಮವಾಗಿ ಎಂಟು ವಿಕಟ್ ಕಳೆದುಕೊಂಡು ಲಖನೌ 176 ರನ್ ಪೇರಿಸಿತ್ತು. ಕೆಕೆಆರ್ ಪರ ಶಾರ್ದೂಲ್ ಠಾಕೂರ್, ಸುನಿಲ್ ನರೈನ್ ಮತ್ತು ವೈಭವ್ ಅರೋರಾ ತಲಾ ಎರಡು ವಿಕೆಟ್ ಪಡೆದರೆ. ವರುಣ್ ಚಕ್ರವರ್ತಿ ಹಾಗೂ ಹರ್ಷಿತ್ ರಾಣಾ ತಲಾ ಒಂದು ವಿಕೆಟ್ ಪಡೆದಿದ್ದರು.