ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಹಣಾಹಣಿಗೆ ಏಳು ದಿನಗಳು ಬಾಕಿ ಇದ್ದು, ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಮೊದಲ ಹಣಾಹಣಿ ನಡೆಯಲಿದೆ. ಹೀಗಾಗಿ ವಾಂಖೆಡೆ ಸ್ಟೇಡಿಯಂನ ಗ್ರೌಂಡ್ಸ್ಟಾಫ್ಗಳನ್ನು ಕೋವಿಡ್ ಪರಿಕ್ಷೆಗೆ ಒಳಪಡಿಸಲಾಗಿದ್ದು, ಓರ್ವ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಐಪಿಎಲ್ ಫ್ರಾಂಚೈಸಿಗಳು ಸ್ವಲ್ಪ ಜಾಗರೂಕರಾಗಿರಲು ಸೂಚಿಸಲಾಗಿದೆ.
"ಪಂದ್ಯಾವಳಿ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ನೀವು ಇಂತಹ ವಿಷಯಗಳನ್ನು ಕೇಳಿದಾಗ ಸ್ವಲ್ಪ ಕಾಳಜಿ ವಹಿಸಬೇಕಾಗುತ್ತದೆ. ನಾವೆಲ್ಲರೂ ಮೂಲ ಮಾದರಿಗಳನ್ನು ಅನುಸರಿಸುತ್ತಿದ್ದೇವೆ, ನಾವು ಸಾಧ್ಯವಾದಷ್ಟು ಜಾಗೃತಿ ವಹಿಸುವಂತೆ ಎಲ್ಲ ಸಿಬ್ಬಂದಿಗಳಿಗೂ ಹಾಗೂ ಪ್ರಾಂಚೈಸಿಗಳಿಗೆ ಸೂಚಿಸುತ್ತೇವೆ ಎಂದು ಮುಂಬೈ ಮೂಲದ ಫ್ರಾಂಚೈಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 10 ರಿಂದ 25 ರವರೆಗೆ ವಾಂಖೆಡೆ ಸ್ಟೇಡಿಯಂನಲ್ಲಿ 10 ಪಂದ್ಯಗಳನ್ನ ಆಯೋಜಿಸಲಾಗಿದೆ. ಮುಂಬೈ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯ ಏಪ್ರಿಲ್ 10 ರಂದು ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.
ಓದಿ : ಸಿಎಸ್ಕೆ ಕ್ಯಾಂಪ್ನಲ್ಲಿ ಧೋನಿ ಭೇಟಿ ಮಾಡಿದ 'ಸರ್.ಜಡೇಜಾ' ಹೇಳಿದ್ದೇನು?
ಮಹಾರಾಷ್ಟ್ರದಲ್ಲಿ ಶುಕ್ರವಾರ 47,827 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, 202 ಮಂದಿ ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ 8,832 ಹೊಸ ಪ್ರಕರಣಗಳು ದಾಖಲಾಗಿವೆ.