ಮೊಹಾಲಿ (ಪಂಜಾಬ್): ಬಿಗಿ ಬೌಲಿಂಗ್ ಮತ್ತು ಉತ್ತಮ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಆರು ವಿಕೆಟ್ಗಳಿಂದ ಗೆಲುವು ದಾಖಲಿಸಿತು. ಪಂಜಾಬ್ ನೀಡಿದ್ದ 154 ರನ್ಗಳ ಗುರಿಯನ್ನು ಗುಜರಾತ್ ತಂಡ ಒಂದು ಬಾಲ್ ಬಾಕಿ ಇರುವಾಗ ಪೂರೈಸಿತು.
ಇಲ್ಲಿನ ಐಎಸ್ ಬಿಂದ್ರಾ ಸ್ಟೇಡಿಯಾಂನಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆಯ ಬೌಲರ್‌ಗಳ ಶಿಸ್ತಿನ ದಾಳಿಯಿಂದ ಪಂಜಾಬ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭದಿಂದಲೂ ಗುಜರಾತ್ ಬೌಲರ್‌ಗಳು ಕಾಡಿದರು.
ಪಂಜಾಬ್ ಇನ್ನಿಂಗ್ಸ್‌ನ 2ನೇ ಎಸೆತದಲ್ಲೇ ಆರಂಭಿಕ ಪ್ರಭ್‌ಸಿಮ್ರನ್ ಸಿಂಗ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಅಜೇಯ 99 ರನ್ ಸಿಡಿಸಿದ್ದ ನಾಯಕ ಶಿಖರ್ ಧವನ್ 8 ರನ್ಗೆ ಔಟಾಗಿ ನಿರಾಶೆ ಮೂಡಿಸಿದರು. ನಂತರದಲ್ಲೂ ಗುಜರಾತ್ ಬೌಲರ್‌ಗಳು ಬಿಗಿ ಬೌಲಿಂಗ್ ಮುಂದುವರೆಸಿದರು. ಇದರಿಂದ ಪಂಜಾಬ್ ಬ್ಯಾಟರ್ಗಳಿಗೆ ಇನ್ನಿಂಗ್ಸ್‌ನ ಉದ್ದಕ್ಕೂ ದೊಡ್ಡ ಮೊತ್ತದ ಜೊತೆಯಾಟ ಕಟ್ಟಲು ಸಾಧ್ಯವಾಗಲಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಶಾರ್ಟ್ (36), ಭಾನುಕ ರಾಜಪಕ್ಷ (20), ಜಿತೇಶ್ ಶರ್ಮ (25), ಸ್ಯಾಮ್ ಕರ್ರನ್ 22) ರನ್ಗಳ ಕಾಣಿಕೆ ನೀಡಿದರು. ಕೊನೆಯ ಹಂತದಲ್ಲಿ ಶಾರುಖ್ ಖಾನ್ 9 ಬಾಲ್ಗಳಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ ಬಾರಿಸಿದ 22 ರನ್‌ಗಳು ಬಾರಿಸಿ ತಂಡದ ಮೊತ್ತ 150 ರನ್ ಗಡಿ ದಾಟಿಸುವಲ್ಲಿ ನೆರವಾದರು. ಅಂತಿಮವಾಗಿ ಪಂಜಾಬ್ ತಂಡ 8 ವಿಕೆಟ್ ಕಳೆದುಕೊಂಡು 153 ರನ್ ಬಾರಿಸಿತು. ಗುಜರಾತ್ ಪರವಾಗಿ ಮೋಹಿತ್ ಶರ್ಮಾ 2 ವಿಕೆಟ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಅಲ್ಜಾರಿ ಜೋಸೆಫ್, ರಶೀದ್ ಖಾನ್ ತಲಾ ವಿಕೆಟ್ ಪಡೆದರು.
ಗಿಲ್ ಅರ್ಧಶತಕ: ಪಂಜಾಬ್ ನೀಡಿದ್ದ 154 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ ವೃದ್ಧಿಮಾನ್ ಸಹಾ 19 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನೊಂದಿಗೆ 30 ಬಾರಿಸಿದರು. ಕೊನೆಯ ಓವರ್ವರೆಗೂ ಕ್ರೀಸ್ನಲ್ಲಿದ್ದ ಶುಭಮನ್ ಗಿಲ್ ಆರ್ಕಷಕ ಅರ್ಧಶತಕ ಬಾರಿಸಿದರು. 49 ಬಾಲ್ಗಳಲ್ಲಿ 7 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸಮೇತ 67 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಗಿಲ್ ಪ್ರಮುಖ ಪಾತ್ರ ವಹಿಸಿದರು.
ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಸಾಯಿ ಸುದರ್ಶನ್ 19 ರನ್ ಮತ್ತು ನಂತರದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ 8 ರನ್ಗೆ ವಿಕೆಟ್ ಒಪ್ಪಿಸಿದರು. ಡೇವಿಡ್ ಮಿಲ್ಲರ್ ಅಜೇಯ 17 ರನ್ ಹಾಗೂ ರಾಹುಲ್ ತೆವಾಟಿಯಾ 5 ರನ್ಗಳೊಂದಿಗೆ ಗುಜರಾತ್ ಕೊನೆಯ ಓವರ್ನಲ್ಲಿ ಒಂದು ಎಸೆತ ಬಾಕಿ ಇರುವಂತೆ ಗೆಲುವು ದಾಖಲಿಸಿತು. ಪಂಜಾಬ್ ಪರ ಆರ್ಷದೀಪ್ ಸಿಂಗ್, ಕಸಿಗೊ ರಬಾಡ, ಹರ್ಪ್ರೀತ್ ಬ್ರಾರ್, ಸ್ಯಾಮ್ ಕರ್ರನ್ ತಲಾ ಒಂದು ವಿಕೆಟ್ ಪಡೆದರು.