ನವದೆಹಲಿ: ಒಂದೆಡೆ ಭಾರತದಲ್ಲಿ ಕೋವಿಡ್ನಿಂದಾಗಿ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್-2021 (ಐಪಿಎಲ್) ಪುನರಾರಂಭಗೊಳ್ಳುವ ಹಂತದಲ್ಲಿದೆ. ಮತ್ತೊಂದೆಡೆ 2022ರ ಐಪಿಎಲ್ ಪಂದ್ಯಾವಳಿಗೆ ಸಿದ್ಧತೆಗಳು ನಡೆಯುತ್ತಿವೆ.
ಮುಂದಿನ ಅಂದರೆ 2022ರ ಐಪಿಎಲ್ ಸೀಸನ್ನಲ್ಲಿ 10 ತಂಡಗಳು ಆಡಲಿವೆ. 8 ತಂಡಗಳೊಂದಿಗಿನ ಪಂದ್ಯ ಇದೇ ಕೊನೆಯದ್ದಾಗಿರುತ್ತದೆ. ಇನ್ನೂ ಎರಡು ತಂಡಗಳು ಐಪಿಎಲ್ಗೆ ಸೇರ್ಪಡೆಯಾಗಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನ ಬಿಕ್ಕಟ್ಟಿನಿಂದ ಐಪಿಎಲ್ ಮೇಲೆ ಪರಿಣಾಮ; ಇಬ್ಬರು ಸ್ಟಾರ್ ಆಟಗಾರರಿಗೆ ಸಿಗುತ್ತಾ ಅವಕಾಶ?
ವೈರಸ್ ಭಯದಲ್ಲೂ 2 ಹೊಸ ತಂಡಗಳ ಸೇರ್ಪಡೆ
2021ರ ಸೀಸನ್‌ಗೆ ಮುಂಚಿತವಾಗಿಯೇ ಬಿಸಿಸಿಐ ಎರಡು ತಂಡಗಳನ್ನು ಸೇರಿಸಬೇಕೆಂದಿತ್ತು. ಆದರೆ ಕೋವಿಡ್ ಸಾಂಕ್ರಾಮಿಕವು ಇದಕ್ಕೆ ಅಡ್ಡಿಯಾಯಿತು. ಇನ್ನೂ ವೈರಸ್ ಭಯ ಇದೆ, ಮೂರನೇ ಅಲೆಯ ಸುಳಿವಿದೆ. ಆದರೂ ಮುಂದಿನ ಸೀಸನ್ನಿಂದ 10 ತಂಡಗಳ ಟೂರ್ನಮೆಂಟ್ ಆಯೋಜಿಸಲು ಬಿಸಿಸಿಐ ಸಜ್ಜಾಗಿದೆ. ಇದರ ಕೆಲಸ ಪ್ರಗತಿಯಲ್ಲಿದೆ. ಸದ್ಯಕ್ಕೆ ಎಲ್ಲರೂ ಐಪಿಎಲ್‌ಗಾಗಿ ಎದುರು ನೋಡುತ್ತಿದ್ದಾರೆ. ಯುಎಇಯಲ್ಲಿ ಇದು ಅತ್ಯಾಕರ್ಷಕ ಪಂದ್ಯಾವಳಿಯಾಗಲಿದೆ ಎಂದು ನಾವು ನಂಬಿದ್ದೇವೆ. ಎಂಟು ತಂಡಗಳನ್ನು ಹೊಂದಿರುವ ಐಪಿಎಲ್‌ನ ಕೊನೆಯ ಸೀಸನ್ ಇದಾಗಿರುತ್ತದೆ ಎಂದು ಅರುಣ್ ಧುಮಾಲ್ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 19ರಿಂದ ಪುನಾರಂಭ
ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಐಪಿಎಲ್‌ನ ದ್ವಿತಿಯಾರ್ಧದ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ಪಂದ್ಯಾವಳಿ ನಡೆಯಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.