ಮುಂಬೈ: ಕೆಕೆಆರ್ ನೀಡಿದ್ದ ಅಲ್ಪ ಮೊತ್ತದ ಗುರಿ ಮುಟ್ಟುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿದ್ದು, 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಫಾಪ್ ಡುಪ್ಲೇಸಿಸ್ ಅವರ ನಿರ್ಧಾರವನ್ನು ಬೌಲರ್‌ಗಳು ದಿಟ್ಟವಾಗಿ ಸಮರ್ಥಿಸಿಕೊಂಡರು. ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 18.5 ಓವರ್‌ಗಳಲ್ಲಿ 128 ರನ್ ಗಳಿಸಿ ಸರ್ವ ಪತನ ಕಂಡಿತು. ಸ್ಫೋಟಕ ಬ್ಯಾಟರ್ ಆ್ಯಂಡ್ರೋ ರಸೆಲ್ 18 ಎಸೆತಗಳಿಂದ 3 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 25 ರನ್ ಕೆಕೆಆರ್ ತಂಡದ ಬ್ಯಾಟರ್ ವೈಯಕ್ತಿಕ ಗರಿಷ್ಠ ರನ್ ಎನಿಸಿತು.
ಆರಂಭಿಕರಾದ ರಹಾನೆ 9, ವೆಂಕಟೇಶ್ ಅಯ್ಯರ್ 10 ರನ್‌ಗಳಿಸಿ ಬೇಗ ಔಟಾದರು. ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದ 13 ರನ್ ಗಳಿಸಿ ಹಸರಂಗಗೆ ವಿಕೆಟ್ ಒಪ್ಪಿಸಿದರು. ನಿತೀಸ್ ರಾಣ 10, ಸುನೀಲ್ ನರೇನ್ 12, ಬಿಲ್ಲಿಂಗ್ಸ್ 14, ಜಾಕ್ಸನ್ 0, ಟೀಂ ಸೌಥಿ 1, ಉಮೇಶ್ ಯಾದವ್ 18 ಹಾಗೂ ಚಕ್ರವರ್ತಿ ಔಟಾಗದೆ 10 ರನ್ ಗಳಿಸಿದರು. ಆರ್‌ಸಿಬಿ ಪರ ಹಸರಂಗ 4 ವಿಕೆಟ್ ಪಡೆದರೆ, ಆಕಾಶ್ ದೀಪ್ 3, ಹರ್ಷಲ್ ಪಟೇಲ್ 2 ಹಾಗೂ ಸಿರಾಜ್ 1 ವಿಕೆಟ್ ಕಿತ್ತರು.
129 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಯೂ ಎದ್ದು ಬಿದ್ದು ಗೆಲುವಿನ ಗುರಿ ಮುಟ್ಟಬೇಕಾಯಿತು. 19.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು. ಇದಕ್ಕೂ ಮುನ್ನ ಉಮೇಶ್ ಯಾದವ್ ಅವರ ಮೊದಲ ಓವರ್‌ನಲ್ಲೇ ಅರ್ಜುನ್ ರಾವತ್ ಶೂನ್ಯಕ್ಕೆ ಔಟಾದರೆ 5 ರನ್ ಗಳಿಸಿ ನಾಯಕ ಫಾಪ್ ಡುಪ್ಲೇಸಿಸ್ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಸುನೀಲ್ ನರೇನ್‌ಗೆ ವಿಕೆಟ್ ಒಪ್ಪಿಸಿದರು. ಇದು ಆರ್‌ಸಿಬಿ ಆರಂಭಿಕ ಆಘಾತ ನೀಡಿತು. ಬಳಿಕ ಕ್ರೀಸ್‌ಗೆ ಬಂದ ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದ್ರೂ 7 ಎಸೆತಗಳಿಂದ 2 ಬೌಂಡರಿ ಸೇರಿ 12 ರನ್‌ಗಳಿಸಿ ಬೇಗ ಪೆವಿಲಿಯನ್ ಸೇರಿಕೊಂಡರು.
ಡೇವಿಡ್ ವಿಲ್ಲಿ 18, ಶೆರ್ಫೇನ್ ರುತ್‌ರ್ಫೋರ್ಡ್ 28, ಶಹಬಾಜ್ ಅಹ್ಮದ್ 20 ಎಸೆತಗಳಿಂದ 3 ಸಿಕ್ಸರ್ ಸೇರಿ 27 ರನ್, ದಿನೇಶ್ ಕಾರ್ತಿಕ್ ಔಟಾಗದೆ 14 ರನ್ ಹಾಗೂ ಹರ್ಷಲ್ ಪಟೇಲ್ 10 ರನ್‌ಗಳಿಸಿ ಔಟಾಗದೆ ಉಳಿದು ತಂಡಕ್ಕೆ ಗೆಲುವು ತಂದು ಕೊಟ್ಟರು. ಕೆಕೆಆರ್ ಪರ ಟೀಮ್ ಸೌಥಿ 3 ವಿಕೆಟ್ ಕಬಳಿಸಿದರೆ, ಉಮೇಶ್ ಯಾದವ್ 2, ಸುನೀಲ್ ನರೇನ್, ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಇತಿಹಾಸ: IPLನಲ್ಲಿ ಈ ದಾಖಲೆ ಬರೆದ 2ನೇ ಪ್ಲೇಯರ್!