ಚೆನ್ನೈ : ಮುಂಬರುವ ಐಪಿಎಲ್ (Indian Premier League) ಪಂದ್ಯಾವಳಿಗಳ ಬಗ್ಗೆ ಬಿಸಿಸಿಐ ಈಗಾಗಲೇ ವೇಳಾಪಟ್ಟಿಯನ್ನು ಅಂತಿಮಗೊಳಿಸಿದೆ ಎಂಬ ವರದಿಯಾಗಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ಜೋಶ್ ತುಂಬಲು ಆಟಗಾರರು ಸಹ ತುದಿಗಾಲ ಮೇಲೆ ನಿಂತಿದ್ದಾರೆ ಎನ್ನಲಾಗುತ್ತಿದೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗಳು ಏಪ್ರಿಲ್ 2ರಿಂದ ಪ್ರಾರಂಭಿಸಲು ಬಿಸಿಸಿಐ ಸರ್ವಸಿದ್ಧತೆ ನಡೆಸಿದೆಯಂತೆ. ಈ ಬಗ್ಗೆ ಈಗಾಗಲೇ ಫ್ರಾಂಚೈಸಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ. ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ ಎಂದೂ ತಿಳಿದು ಬಂದಿದೆ.
10 ತಂಡಗಳ ಸೆಣಸಾಟ : ಟ್ರೋಫಿಗಾಗಿ ಈ ಸಾರಿ 10 ತಂಡಗಳು ಪಾಲ್ಗೊಳ್ಳಲಿವೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ತರಿಸಿದೆ. ಒಟ್ಟು 60 ದಿನಗಳ ಕಾಲ ಹಬ್ಬದೂಟ ನೀಡಲಿರುವ ಐಪಿಎಲ್ 74 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಯೋಚಿಸಿದೆ ಎನ್ನಲಾಗುತ್ತಿದೆ. ಜೂನ್ ಮೊದಲ ವಾರದಲ್ಲಿ ಫೈನಲ್ ಪಂದ್ಯ ನಡೆಸಲು ಮಾತುಕತೆ ನಡೆಯುತ್ತಿದೆಯಂತೆ.
ಮೊದಲ ಪಂದ್ಯ : ಮೊದಲ ಪಂದ್ಯ ಚೆನ್ನೈನ ಚೆಪಾಕ್ನಲ್ಲಿ ಆಯೋಜಿಸಲಾಗಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಣಕ್ಕಿಳಿಯಲಿದೆಯಂತೆ. ಆದರೆ, ಎದುರಾಳಿ ತಂಡ ಯಾವುದೆಂದು ಇನ್ನೂ ಸ್ಪಷ್ಟತೆ ಇಲ್ಲ. ಇದು ತಾತ್ಕಾಲಿಕವಾಗಿದೆ. ಬಿಸಿಸಿಐ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅತೀ ಶೀಘ್ರದಲ್ಲೇ ಹೊರಡಿಸಲಿದೆ.
ಭಾರತದಲ್ಲಿ ಮಾತ್ರ : ಎಲ್ಲವೂ ಸರಿಯಾಗಿ ನಡೆದರೆ ಮುಂದಿನ ವರ್ಷದ ಐಪಿಎಲ್ (15ನೇ ಸೀಸನ್) ಭಾರತದಲ್ಲಿಯೇ ನಡೆಯಲಿದೆ. ಅದಕ್ಕಾಗಿ ನಾನು ಸಹ ಉತ್ಸುಕನಾಗಿದ್ದೇನೆ.
ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಪಾಕ್ ಸ್ಟೇಡಿಯಂನಲ್ಲಿ ಆಡುವುದನ್ನು ನಾವು-ನೀವು ನೋಡಬಹುದು. ಶೀಘ್ರದಲ್ಲೇ ಒಂದು ಮೆಗಾ ಹರಾಜು ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೇಯ್ ಷಾ ತಿಳಿಸಿದ್ದಾರೆ.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ಗೆ ಇ-ಮೇಲ್ ಮೂಲಕ ಜೀವ ಬೆದರಿಕೆ