ಪುಣೆ(ಮಹಾರಾಷ್ಟ್ರ): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಮೂರನೇ ಗೆಲುವು ದಕ್ಕಿದೆ. 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 18ನೇ ಪಂದ್ಯದಲ್ಲಿ ಆರ್ಸಿಬಿ 7 ವಿಕೆಟ್‌ಗಳ ಅಂತರದಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ. ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದ ಮುಂಬೈ ಇಂಡಿಯನ್ಸ್ಗೆ ಸತತ ನಾಲ್ಕನೇ ಬಾರಿಗೆ ಮುಖಭಂಗವಾಗಿದೆ. ಅನುಜ್ ರಾವತ್ ಹಾಗೂ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅಬ್ಬರ ಆರ್ಸಿಬಿಯನ್ನು ಗೆಲ್ಲುವಂತೆ ಮಾಡಿದೆ.
ಟಾಸ್ ಸೋತು ಅನಿವಾರ್ಯವಾಗಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್(68) ಅವರ ಏಕಾಂಗಿ ಹೋರಾಟ ಹಾಗೂ ಇಶಾನ್ ಕಿಶನ್ 26, ರೋಹಿತ್ ಶರ್ಮಾ 26 ರನ್ಗಳು ಮುಂಬೈ ತಂಡ ಉತ್ತಮ ಮೊತ್ತವನ್ನು ಪೇರಿಸುವಂತೆ ಮಾಡಿತ್ತು. ಡೆವಾಲ್ಡ್ ಬ್ರೇವಿಸ್ 8 ರನ್ ಗಳಿಸಿದರೆ, ತಿಲಕ್ ವರ್ಮಾ ಮತ್ತು ಕೀರನ್ ಪೊಲಾರ್ಡ್ ಅವರು ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಆರ್ಸಿಬಿ ಬೌಲರ್ಗಳು ಮುಂಬೈ ತಂಡವನ್ನು ಸ್ವಲ್ಪ ಮಟ್ಟಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಹರ್ಷಲ್ ಪಟೇಲ್ 23ರನ್ ನೀಡಿ 2 ವಿಕೆಟ್, ವಾನಿಂದು ಹಸರಂಗ 28 ರನ್ನೀಡಿ 2 ವಿಕೆಟ್, ಆಕಾಶ್ ದೀಪ್ 20 ರನ್ ನೀಡಿ 1 ವಿಕೆಟ್ ಗಳಿಸಿದರು. ಆದರೆ ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲೂ 51 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಮುಂಬೈ ತಂಡ ನೀಡಿದ್ದ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡ ನಿಧಾನವಾಗಿಯೇ ಆಟವಾಡಿತು. ಆರ್ಸಿಬಿ ಕೇವಲ ಮೂರು ವಿಕೆಟ್ ನಷ್ಟಕ್ಕೆ ಪಂದ್ಯವನ್ನು ಗೆದ್ದು ಬೀಗಿತು.
ಕೇವಲ 18.3 ಓವರ್ಗಳಲ್ಲಿ ಅನುಜ್ ರಾವತ್ ಅವರ 66 ರನ್, ವಿರಾಟ್ ಕೊಹ್ಲಿ 48, ಪಾಪ್ ಡುಪ್ಲೆಸಿಸ್ ಅವರ 16 ರನ್ಗಳ ಕೊಡುಗೆಯಿಂದಾಗಿ ಗೆಲುವು ಸಾಧಿಸಿದೆ. ಇದಲ್ಲದೇ ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಕ್ರಮವಾಗಿ 7 ಮತ್ತು 8 ರನ್ಗಳಿಸಿದ್ದಾರೆ. ಮುಂಬೈ ಬೌಲರ್ಗಳು ಆರ್ಸಿಬಿ ಬ್ಯಾಟರ್ಗಳನ್ನು ಕಟ್ಟಿಹಾಕಲು ವಿಫಲವಾಗಿದ್ದು, ಜಯದೇವ್ ಉನದ್ಕತ್ ಮತ್ತು ಡೆವಾಲ್ಡ್ ಬ್ರಾವಿಸ್ ತಲಾ ಒಂದು ವಿಕೆಟ್ ಮಾತ್ರವೇ ಪಡೆಯಲು ಸಾಧ್ಯವಾಯಿತು.
ಇದನ್ನೂ ಓದಿ: ಅಭಿಷೇಕ್ ಅಬ್ಬರ: ಹೈದರಾಬಾದ್ ಆಲ್ರೌಂಡ್ ಆಟದ ಮುಂದೆ ಮಂಕಾದ ಸಿಎಸ್ಕೆಗೆ 4ನೇ ಸೋಲು