ಹೈದರಬಾದ್: ಮಂಡಿ ನೋವಿನ ಸಮಸ್ಯೆಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ವೇಗಿ ಟಿ.ನಟರಾಜನ್ ಈ ಬಾರಿಯ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.
ಐಪಿಎಲ್ 2021ರ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕೇವಲ ಒಂದು ಪಂದ್ಯವನ್ನಾಡಿರುವ ನಟರಾಜನ್, ಮಂಡಿ ನೋವು ಕಾಣಿಸಿಕೊಂಡ ಕಾರಣ ಮೂರು ಪಂದ್ಯಗಳಿಂದ ಹೊರಗುಳಿದಿದ್ದರು. ಈ ನಡುವೆ ಅವರ ಸ್ಕ್ಯಾನಿಂಗ್ ವರದಿಗಳು ಬಂದಿದ್ದು, ಗಾಯದ ಸಮಸ್ಯೆ ಕೊಂಚ ಗಂಭೀರವಾಗಿರುವ ಕಾರಣ ಬಿಸಿಸಿಐ ವೈದ್ಯಾಧಿಕಾರಿಗಳ ತಂಡ ನೀಡಿರುವ ಸಲಹೆ ಮೇರೆಗೆ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ.
ಈ ಬಗ್ಗೆ ಬಿಸಿಸಿಐ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ವೈದ್ಯಾಧಿಕಾರಿಗಳ ತಂಡ ಚರ್ಚೆ ನಡೆಸಿದ್ದು, ಎಡಗೈ ವೇಗಿಗೆ ವಿಶ್ರಾಂತಿ ನೀಡುವ ನಿರ್ಧಾರಕ್ಕೆ ಬಂದಿವೆ. ಗಾಯದ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇರುವುದರಿಂದ ವಿಶ್ರಾಂತಿಗೆ ಸೂಚಿಸಲಾಗಿದೆ. ಸನ್ ರೈಸರ್ಸ್ ಈಗಾಗಲೇ ಬದಲಿ ಆಟಗಾರನ ಹುಡುಕಾಟ ಆರಂಭಿಸಿದೆ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.
ಇದೇ ವರ್ಷ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬಂದ ಬಳಿಕ ನಟರಾಜನ್ ಎರಡು ತಿಂಗಳ ಕಾಲ ಎನ್‌ಸಿಎನಲ್ಲಿ ಇದ್ದರು. ಅಲ್ಲದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲೂ ತಮಿಳುನಾಡು ಪರ ಆಡಿರಲಿಲ್ಲ. ಎನ್‌ಸಿಎನಲ್ಲಿ ನಟರಾಜನ್ ಫಿಟ್ ಎಂದು ಹೇಳಿದಾಗ ಅವರನ್ನ ಇಂಗ್ಲೆಂಡ್ ವಿರುದ್ಧ ಒಂದು ಏಕದಿನ ಪಂದ್ಯ ಹಾಗೂ ಟಿ-20 ಸರಣಿಯಲ್ಲಿ ಆಡಿಸಲಾಗಿತ್ತು. ಈಗ ಬಿಸಿಸಿಐನ ಮೂಲಗಳ ಪ್ರಕಾರ ನಟರಾಜನ್ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ತೆರಳಲಿದ್ದಾರೆ.
ಓದಿ : 196ನೇ ಪಂದ್ಯದಲ್ಲಿ 'ವಿರಾಟ' ಪರ್ವ: 6,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಕೊಹ್ಲಿ