ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ಗಳಿಕೆ ಮಾಡಿದ್ದು, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ 157 ರನ್ ಸ್ಪರ್ಧಾತ್ಮಕ ಗುರಿ ನೀಡಿದೆ.
ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಎದುರಾಳಿ ತಂಡದ ಬೌಲರ್ಗಳ ಮೇಲೆ ದಾಳಿ ನಡೆಸಿ ಶತಕದ ಆಟವಾಡಿದರು. ಹೀಗಾಗಿ ತಂಡ 11 ಓವರ್ಗಳಲ್ಲಿ 111ರನ್ಗಳಿಕೆ ಮಾಡಿತು.
53ರನ್ಗಳಿಕೆ ಮಾಡಿದ್ದ ವೇಳೆ ವಿರಾಟ್ ಬ್ರಾವೋ ಓವರ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಕಣಕ್ಕಿಳಿದ ಎಬಿಡಿ ಕೂಡ 12ರನ್ಗಳಿಸಿ ಥಾಕೂರ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. 70ರನ್ಗಳಿಕೆ ಮಾಡಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಪಡಿಕ್ಕಲ್ ಕೂಡ ಬ್ರಾವೋ ಓವರ್ನಲ್ಲೇ ವಿಕೆಟ್ ನೀಡಿದ್ದರಿಂದ ತಂಡ ದಿಢೀರ್ ಆಘಾತಕ್ಕೊಳಗಾಯಿತು.
ರೋಹಿತ್ ಶರ್ಮಾ ದಾಖಲೆ ಮುರಿದ ವಿರಾಟ್
ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ನಲ್ಲಿ ವಿರಾಟ್ ಬ್ಯಾಟ್ನಿಂದ ಸಿಡಿದ 41ನೇ ಅರ್ಧಶತಕ ಇದಾಗಿದ್ದು, ಈ ಮೂಲಕ ರೋಹಿತ್ ಶರ್ಮಾ ದಾಖಲೆ ಬ್ರೇಕ್ ಮಾಡಿದರು. 201ನೇ ಪಂದ್ಯದ 193ನೇ ಇನ್ನಿಂಗ್ಸ್ನಲ್ಲಿ ವಿರಾಟ್ ಈ ಸಾಧನೆ ಮಾಡಿದ್ದು, ರೋಹಿತ್ ಶರ್ಮಾ 208ನೇ ಪಂದ್ಯದ 203ನೇ ಇನ್ನಿಂಗ್ಸ್ಗಳಲ್ಲಿ 40 ಅರ್ಧಶತಕ ಸಿಡಿಸಿದ್ದಾರೆ.
ಇದನ್ನೂ ಓದಿ: RCB ಪರ ಡೆಬ್ಯು ಮಾಡಿದ ಡೇವಿಡ್; IPLನಲ್ಲಿ ಆಡುವ ಅವಕಾಶ ಪಡೆದ ಮೊದಲ ಸಿಂಗಾಪುರ್ ಪ್ಲೇಯರ್
ದಿಢೀರ್ ಕುಸಿತ ಕಂಡ ಆರ್ಸಿಬಿ
200ರ ರನ್ ಗಡಿ ದಾಟುವ ಗುರಿಯಲ್ಲಿದ್ದ ಆರ್ಸಿಬಿ ತಂಡಕ್ಕೆ ಎದುರಾಳಿ ಬೌಲರ್ಗಳು ಆಘಾತ ನೀಡಿದರು. ವಿರಾಟ್-ದೇವದತ್ ವಿಕೆಟ್ ಪತನಗೊಂಡ ಬಳಿಕ ಯಾವೊಬ್ಬ ಪ್ಲೇಯರ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಎಬಿಡಿ 12, ಮ್ಯಾಕ್ಸ್ವೆಲ್ 11, ಡೇವಿಡ್ 1, ಪಟೇಲ್ 3 ಹಾಗೂ ಹಸರಂಗ್ 1ರನ್ಗಳಿಕೆ ಮಾಡಿದರು. ಹೀಗಾಗಿ ತಂಡ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 156ರನ್ಗಳಿಕೆ ಮಾಡಿತು.
ಚೆನ್ನೈ ಪರ ಬ್ರಾವೋ 3 ವಿಕೆಟ್ ಪಡೆದು ಗಮನ ಸೆಳೆದರೆ, ಠಾಕೂರ್ 2 ವಿಕೆಟ್ ಹಾಗೂ ಚಹರ್ 1 ವಿಕೆಟ್ ಕಬಳಿಸಿದರು.