ಲಂಡನ್: ಕೊರೊನಾ ಮಹಾಮಾರಿ ಕಾರಣ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸ್ಥಗಿತಗೊಂಡಿದ್ದು, ಅದು ಮರು ಆಯೋಜನೆಗೊಳ್ಳುವ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಖಚಿತ ಮಾಹಿತಿ ಇಲ್ಲ. ಒಂದು ವೇಳೆ ವೇಳಾಪಟ್ಟಿ ಮರು ನಿಗದಿಯಾದರೆ ಆಡಲು ಸಿದ್ಧವಿದ್ದೇನೆ ಎಂದು ಆರ್ಚರ್ ಹೇಳಿಕೊಂಡಿದ್ದಾರೆ.
ಮೊಣಕೈ ಗಾಯದಿಂದಾಗಿ ಐಪಿಎಲ್ನಿಂದ ದೂರ ಉಳಿದಿದ್ದ ಆರ್ಚರ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಜತೆಗೆ ಕೆಂಟ್ ವಿರುದ್ಧದ ಕೌಂಟಿ ಚಾಂಪಿಯನ್ಶಿಪ್ ಪಂದ್ಯದಲ್ಲಿ ಸಸೆಕ್ಸ್ ಪರ ಆಡ್ತಿದ್ದು, 13 ಓವರ್ಗಳಲ್ಲಿ 29ರನ್ ನೀಡಿ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿರುವ ಅವರು, ಐಪಿಎಲ್ಗೋಸ್ಕರ ನಾನು ಭಾರತಕ್ಕೆ ಹೋಗಿದ್ದರೆ ವಾಪಸ್ ಬರಬೇಕಾಗುತ್ತಿತ್ತು. ಆದರೆ ಇದೀಗ ಸಂಪೂರ್ಣವಾಗಿ ಗುಣಮುಖನಾಗಿದ್ದು, ಒಂದು ವೇಳೆ ಐಪಿಎಲ್ ಮರುನಿಗದಿಯಾದರೆ ಅದರಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಭಾರತಕ್ಕೆ ಹೋಗದಿರುವುದು ಕಠಿಣ ನಿರ್ಧಾರವಾಗಿತ್ತು. ಹೋಗಿದ್ದರೆ ಎಷ್ಟು ಪಂದ್ಯಗಳಲ್ಲಿ ಭಾಗಿಯಾಗುತ್ತಿದೆ ಎಂಬುದು ಗೊತ್ತಿರಲಿಲ್ಲ ಎಂದಿದ್ದಾರೆ. ನಾನು ತೆಗೆದುಕೊಂಡಿದ್ದ ನಿರ್ಧಾರಕ್ಕೆ ರಾಜಸ್ಥಾನ ಹಾಗೂ ಇಂಗ್ಲೆಂಡ್ ಬೆಂಬಲ ನೀಡಿತು ಎಂದು ತಿಳಿಸಿದ್ದಾರೆ.
ಕಳೆದ ಋತುವಿನ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಇವರು 20 ವಿಕೆಟ್ ಪಡೆದುಕೊಂಡಿದ್ದರು. ಇದೀಗ ಒಂದೂವರೆ ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ ಆರ್ಚರ್ ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ.