ಬೆಂಗಳೂರು: ಪ್ರಸಕ್ತ ಐಪಿಎಲ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರ ಬಿದ್ದಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಡು ಪ್ಲೆಸಿಸ್ ಪಡೆ ಸೋಲು ಕಂಡಿದೆ. ಶುಭಮನ್ ಗಿಲ್ ಸಿಡಿಸಿದ ಭರ್ಜರಿ ಸೆಂಚುರಿಯಿಂದ ಗುಜರಾತ್ ತಂಡ ಗೆದ್ದು ಬೀಗಿದೆ. ಫ್ಲೇ ಆಫ್ಗೆ ತಂಡವನ್ನು ಕೊಂಡೊಯ್ಯಬೇಕೆಂಬ ಛಲದಿಂದ ಕಿಂಗ್ ವಿರಾಟ್ ಕೊಹ್ಲಿ ಸಿಡಿಸಿದ ಶತಕ ವ್ಯರ್ಥವಾಗಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕೊಹ್ಲಿ ಶತಕದ ನೆರವಿನೊಂದಿಗೆ ಐದು ವಿಕೆಟ್ ನಷ್ಟಕ್ಕೆ 197 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಗುಜರಾತ್ ಪರ ಶುಭಮನ್ ಗಿಲ್ ಅದ್ಬುತ ಶತಕ ಬಾರಿಸುವ ಮೂಲಕ ತಂಡವನ್ನು ಗೆಲ್ಲಿಸಿದರು. ಇನ್ನೂ ಐದು ಎಸತೆಗಳು ಬಾಕಿ ಇರುವಾಗಲೇ ಗುಜರಾತ್ ತಂಡ ಆರು ವಿಕೆಟ್ಗಳಿಂದ ಗೆಲುವಿನ ನಗೆ ಬೀರಿತು.
ಬೆಂಗಳೂರಲ್ಲಿ ಸುರಿದ ಭಾರಿ ಮಳೆಯಿಂದ ಪಂದ್ಯ ತಡವಾಗಿ ಆರಂಭವಾಯಿತು. ಇತ್ತ, ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್‌ಸಿಬಿ ತಂಡ ಇತ್ತು. ಇದರ ನಡುವೆ ಭರ್ಜರಿ ಫಾರ್ಮ್ನಲ್ಲಿದ್ದ ಕಿಂಗ್ ಕೊಹ್ಲಿ ದಾಖಲೆಯ ಶತಕ ಸಿಡಿಸಿದರು. 61 ಎಸೆತದಲ್ಲಿ 13 ಬೌಂಡರಿ, ಒಂದು ಸಿಕ್ಸರ್ ಸಮೇತ 101 ರನ್ ಬಾರಿಸಿ ಈ ಆವೃತ್ತಿಯಲ್ಲಿ ಸತತ 2ನೇ ಶತಕ ದಾಖಲಿಸಿದರು.
ಕೊಹ್ಲಿ ಜೊತೆ ಇನ್ಸಿಂಗ್ ಆರಂಭಿಸಿದ ನಾಯಕ ಫಾಫ್ ಡು ಪ್ಲೆಸಿಸ್ 28 ರನ್ ಗಳಿಸಿ ನಿರ್ಗಮಿಸಿದರು. ನಂತರ ಬಂದ ಮಾಕ್ಸ್ವೆಲ್ 11 ರನ್ಗೆ ಪೆವಿಲಿಯನ್ ಸೇರಿಸಿದರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಮಹಿಪಾಲ್ ಲೊಮ್ರೋರ್ ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಆಲ್ ರೌಂಡರ್ ಬ್ರೇಸ್ವೆಲ್ 26 ರನ್ಗಳ ಕಾಣಿಕೆ ನೀಡಿದರು. ದಿನೇಶ್ ಕಾರ್ತಿಕ್ ಈ ಆವೃತ್ತಿಯಲ್ಲಿ 4ನೇ ಬಾರಿಗೆ ಶೂನ್ಯಕ್ಕೆ ಔಟಾಗುವ ಮೂಲಕ ತಮ್ಮ ಕಳಪೆ ಆಟವನ್ನು ಮುಂದುವರೆಸಿದರು. ಕೊನೆಯಲ್ಲಿ ಯುವ ಆಟಗಾರ ಅನುಜ್ ರಾವತ್ ಅವರು ವಿರಾಟ್ ಜೊತೆ ಸೇರಿ ಉತ್ತಮವಾದ ಜೊತೆಯಾಟ ನೀಡಿದರು. ಕೊಹ್ಲಿ ಅಜೇಯ 101 ರನ್ ಬಾರಿಸಿದರೆ, ಅನುಜ್ ಅಜೇಯ 23 ರನ್ ಗಳಿಸಿದರು. ಇದರಿಂದ ಆರ್‌ಸಿಬಿ 197 ರನ್ ಪೇರಿಸಿತ್ತು.
198 ರನ್ ಟಾರ್ಗೆಟ್ ಗುರಿ ಬೆನ್ನಟ್ಟಿದ್ದ ಗುಜರಾತ್ ಪರ ಶುಭಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಪ್ರರ್ದಶಿಸಿದರು. ವೃದ್ಧಿಮಾನ್ ಸಾಹ 12 ರನ್ ಸಿಡಿಸಿ ಔಟಾದರು, ಎರಡನೇ ವಿಕೆಟ್ ಶುಭಮನ್ ಗಿಲ್ ಹಾಗೂ ವಿಜಯ ಶಂಕರ್ ಉತ್ತಮ ಜೊತೆಯಾಟ ನೀಡಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ವಿಜಯ್ ಶಂಕರ್ 35 ಎಸೆತದಲ್ಲಿ 53 ರನ್ ಬಾರಿಸಿ ನಿರ್ಗಮಿಸಿದರು. ಈ ಜೋಡಿ 123 ರನ್ಗಳ ಜೊತೆಯಾಟ ನೀಡಿತು.
ಇದರ ನಂತರ ಬಂದ ದಸೂನ ಶನಕ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ, ಗಿಲ್ ಆರ್ಭಟ ಮುಂದುವರಿಯಿತು. ಇತ್ತ ಡೇವಿಡ್ ಮಿಲ್ಲರ್ ಕೇವಲ 6 ರನ್ ಸಿಡಿಸಿ ಔಟಾದರು. ಅಂತಿಮ ಆರು ಎಸೆತದಲ್ಲಿ ಗುಜರಾತ್ ಗೆಲುವಿಗೆ ಎಂಟು ರನ್ ಬೇಕಾಗಿತ್ತು. ಆದರೆ, ವೇಯ್ನೆ ಪಾರ್ನೆಲ್ ಎಸೆತದ ಮೊದಲ ಎಸೆತ ನೋಬಾಲ್ ಆಗಿ ದುಬಾರಿಯಾಯಿತು. ಮರು ಎಸೆತ ವೈಡ್ ಆಯಿತು. ಫ್ರೀ ಹಿಟ್ ಅವಕಾಶದಲ್ಲಿ ಗಿಲ್ ಸಿಕ್ಸರ್ ಸಿಡಿಸಿ ತಂಡಕ್ಕೆ ಆರು ವಿಕೆಟ್ಗಳ ಗೆಲುವು ತಂದುಕೊಟ್ಟರು. ಅಲ್ಲದೇ, ಈ ಸಿಕ್ಸರ್ ಮೂಲಕ ಗಿಲ್ ಶತಕ ಪೂರೈಸಿದರು. 52 ಎಸೆತಗಳಲ್ಲಿ 14 ಬೌಂಡರಿ, ಎರಡು ಸಿಕ್ಸರ್ನೊಂದಿಗೆ 104 ರನ್ ಬಾರಿಸಿದರು. ಈ ಸೋಲಿನಿಂದ ಆರ್‌ಸಿಬಿ ಟೂರ್ನಿಯಿಂದ ಹೊರ ಬಿತ್ತು.
ಇದನ್ನೂ ಓದಿ: IPL 2023: ಕ್ಯಾಮರೂನ್ ಗ್ರೀನ್ ಶತಕ, ರೋಹಿತ್ ಅರ್ಧಶತಕ.. ಮುಂಬೈಗೆ ಪ್ಲೇ ಆಫ್ ಆಸೆ ಜೀವಂತ