ಅಹಮದಾಬಾದ್: ಐಪಿಎಲ್ 16 ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಶುಭಾರಂಭ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಂಟಿಂಗ್ ಮಾಡಿದ್ದ ಚೈನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟನ್ಸ್ ತಂಡಕ್ಕೆ 179 ರನ್ ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ್ದ ಗುಜರಾತ್ ಟೈಟನ್ಸ್ 19.2 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿ ಗೆಲುವಿನ ಗುರಿ ತಲುಪಿತು.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಖಾಮುಖಿಯಾಗಿದ್ದವು.
ಗುಜರಾತ್ ಟೈಟನ್ಸ್ ಆರಂಭಿಕ ಆಟಗಾರರಾದ ಶುಭಮನ್ ಗಿಲ್ (63) ಮತ್ತು ವೃದ್ಧಿಮಾನ ಸಹಾ(25 ) ತಂಡಕ್ಕೆ ಉತ್ತಮ ಆರಂಭ ನೀಡಿದರು. ವಿಜಯ್ ಶಂಕರ್ 27 , ಬಿ ಸಾಯಿ ಸುದರ್ಶನ್ 22 ರನ್ ಗಳಿಸಿದರೇ, ಹಾರ್ದಿಕ್ ಪಾಂಡ್ಯ 8 ರನ್ ಗಳಿಸಿ ಔಟಾದರು. ಅಂತಿಮವಾಗಿ ರಾಹುಲ್ ತೇವಾಟಿಯಾ ಅಜೇಯ 14 ಮತ್ತು ರಷೀದ್ ಖಾನ್ ಕೇವಲ ಮೂರು ಎಸೆತಗಳಲ್ಲಿ ಅಜೇಯ 10 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರ (92) ಭರ್ಜರಿ ಬ್ಯಾಟಿಂಗ್ ಕ್ರೀಡಾಭಿಮಾನಿಗಳಿಗೆ ಖುಷಿ ನೀಡಿತು. ಕೇವಲ 50 ಬಾಲ್ಗಳನ್ನು ಎದುರಿಸಿದ ರುತುರಾಜ್, 9 ಸಿಕ್ಸ್ ಹಾಗೂ 4 ಬೌಂಡರಿಗಳೊಂದಿಗೆ ಕೇವಲ 8 ರನ್ಗಳಿಂದ ಶತಕ ವಂಚಿತರಾದರು. ಇವರೊಂದಿಗೆ ಕ್ರೀಸ್ಗೆ ಇಳಿದ ಡೆವೊನ್ ಕಾನ್ವೆ ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದರು.
ಉಳಿದಂತೆ ಮೊಯೀನ್ ಅಲಿ ಅವರ 23 ರನ್ ತಂಡದ ಪರ ದಾಖಲಾದ ಅತಿ ಹೆಚ್ಚಿನ ಸ್ಕೋರ್ ಎನಿಸಿದೆ. ಬೆನ್ ಸ್ಟೋಕ್ಸ್ 7, ಅಂಬಟಿ ರಾಯುಡು 12, ಶಿವಂ ದುಬೆ 19, ರವೀಂದ್ರ ಜಡೇಜಾ 1 ರನ್ ಗಳಿಸಿ ತಂಡಕ್ಕೆ ತಮ್ಮ ಅಲ್ಪ ಕಾಣಿಕೆ ನೀಡಿದರು. ಕೊನೆಯ ಘಟ್ಟದ ವೇಳೆ ಕ್ರೀಸ್ಗೆ ಕಾಲಿಟ್ಟ ಧೊನಿ, ಒಂದು ಭರ್ಜಸಿ ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿ 14 ರನ್ ಗಳಿಸಿ ಔಟ್ ಆಗದೇ ಉಳಿದರು. ಮಿಚೆಲ್ ಸ್ಯಾಂಟ್ನರ್ 1 ರನ್ ಗಳಿಸಿದರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.
ಗುಜರಾತ್ ಟೈಟನ್ಸ್ ಪರವಾಗಿ ಬೌಲಿಂಗ್‌ನಲ್ಲಿ ಅಬ್ಬರಿಸಿದ ಮೊಹಮ್ಮದ್ ಶಮಿ, ರಶೀದ್ ಖಾನ್ ಹಾಗೂ ಅಲ್ಜಾರಿ ಜೋಸೆಫ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಜೋಶುವಾ ಲಿಟಲ್ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: IPL 2023: 16ನೇ ಆವೃತ್ತಿಯ ಐಪಿಎಲ್ಗೆ ಅದ್ಧೂರಿ ಆರಂಭ... ನಾಟು ನಾಟು ಹಾಡಿಗೆ ರಶ್ಮಿಕಾ ಡ್ಯಾನ್ಸ್