ಹೈದರಾಬಾದ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೆಲ ಯುವ ಪ್ರತಿಭೆಗಳು ಮಿಂಚು ಹರಿಸಿದ್ದು, ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಪೈಕಿ ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಲ್ರೌಂಡರ್ ತಿಲಕ್ ವರ್ಮಾ ಕೂಡ ಒಬ್ಬರು. ಕೇವಲ 19 ವರ್ಷದ ಈ ಯುವ ಪ್ರತಿಭೆ ತಮಗೆ ಸಿಕ್ಕ ಅವಕಾಶದಲ್ಲೇ ಅದ್ಭುತ ಪ್ರದರ್ಶನ ನೀಡಿ, ಟೀಂ ಇಂಡಿಯಾ ಕದ ತಟ್ಟಲು ಸಜ್ಜಾಗಿದ್ದಾರೆ.
15ನೇ ಆವೃತ್ತಿ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಬ್ಯಾಟ್ ಬೀಸಿರುವ ಇವರು, ತಾವು ಆಡಿರುವ 14 ಪಂದ್ಯಗಳಿಂದ 397ರನ್ಗಳಿಸಿದ್ದಾರೆ. ಈ ಮೂಲಕ ಮುಂಬೈ ಪರ ಅತಿ ಹೆಚ್ಚು ರನ್ ಪೇರಿಸಿರುವ ಎರಡನೇ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಪ್ಲೇಯರ್ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ, ಸುನಿಲ್ ಗವಾಸ್ಕರ್ ಈಗಾಗಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ 'ಈಟಿವಿ ಭಾರತ' ಜೊತೆ ತಿಲಕ್ ವರ್ಮಾ ಮಾತನಾಡಿದ್ದಾರೆ. ಚೊಚ್ಚಲ ಸೀಸನ್ನಲ್ಲೇ ಆಡಲು ಅವಕಾಶ ಸಿಗಲಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಜೊತೆಗೆ ಇಷ್ಟೊಂದು ಪ್ರಭಾವ ಬೀರುತ್ತೇನೆಂದು ನಿರೀಕ್ಷೆ ಇರಲಿಲ್ಲ. 14 ಪಂದ್ಯಗಳಲ್ಲೂ ತಂಡ ಪ್ರತಿನಿಧಿಸಿರುವುದು, ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿರುವುದು ಅದ್ಭುತ ಅನುಭವ. ಆದರೆ, ತಂಡ ಪ್ಲೇ-ಆಫ್ ಪ್ರವೇಶ ಪಡೆದುಕೊಳ್ಳದಿರುವುದು ನೋವುಂಟು ಮಾಡಿದೆ ಎಂದರು.
ಮುಂಬೈ ಪರ ಎಲ್ಲ ಪಂದ್ಯ ಆಡಿರುವ ತಿಲಕ್: ತಂಡದ ಪರ ಬಹುತೇಕ ಎಲ್ಲ ಪಂದ್ಯಗಳಲ್ಲೂ ಬ್ಯಾಟಿಂಗ್ ಮಾಡಿದ್ದೇನೆ. ಈ ವೇಳೆ ಪ್ರತಿಯೊಬ್ಬರ ಸಲಹೆ ಮತ್ತು ಸೂಚನೆ ಪಾಲಿಸುತ್ತೇನೆ. ಟೀಂ ಇಂಡಿಯಾ ಪರ ನಾನು ಆಡುತ್ತೇನೆಂದು ರೋಹಿತ್ ಶರ್ಮಾ ಹಾಗೂ ಸುನಿಲ್ ಗವಾಸ್ಕರ್ ಹೇಳಿದಾಗ ತುಂಬಾ ಖುಷಿಯಾಯಿತು. ಜೊತೆಗೆ ಕಣ್ಣಲ್ಲಿ ನೀರು ತುಂಬಿ ಬಂತು ಎಂದಿದ್ದಾರೆ. ಮುಂದಿನ ವರ್ಷ ನನ್ನ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಲಿದೆ. ಪೂರ್ಣ ಪ್ರಮಾಣದ ಆಲ್ರೌಂಡರ್ ಆಗಿ ನೋಡಲು ತಂಡ ಬಯಸಿದ್ದು, ಖಂಡಿತವಾಗಿ ಈ ವಿಷಯದತ್ತ ಗಮನ ಹರಿಸಲಿದ್ದೇನೆ ಎಂದರು.
ದಿಗ್ಗಜರೊಂದಿಗೆ ಚರ್ಚೆ, ಸಲಹೆ: ಸಚಿನ್ ತೆಂಡೂಲ್ಕರ್, ಮಹೇಲಾ ಜಯವರ್ಧನೆ, ಜಹೀರ್ ಖಾನ್ ಮತ್ತು ರೋಹಿತ್ ಶರ್ಮಾ ಅವರನ್ನ ನಾನು ಟಿವಿಯಲ್ಲಿ ಮಾತ್ರ ನೋಡಿದ್ದೆನು. ಅವರನ್ನ ಭೇಟಿಯಾಗಿರಲಿಲ್ಲ. ಆದರೆ, ಮೊದಲ ಸಲ ಹೋಟೆಲ್ನಲ್ಲಿ ನೋಡಿದಾಗ ತುಂಬಾ ಸಂತೋಷವಾಯಿತು. ಅವರ ಜೊತೆ ಮಾತನಾಡುವಷ್ಟು ಧೈರ್ಯ ನನ್ನ ಬಳಿ ಇರಲಿಲ್ಲ. ಆದರೆ, ಪಂದ್ಯಕ್ಕೂ ಮುಂಚಿತವಾಗಿ ಚರ್ಚೆಯಲ್ಲಿ ಭಾಗಿಯಾಗಿದ್ದಾಗ ಸ್ನೇಹದಿಂದ ಮಾತನಾಡ್ತಿದ್ದರು. ಯಾವ ಬೌಲರ್ ವಿರುದ್ಧ ಯಾವ ರೀತಿಯಲ್ಲಿ ಬ್ಯಾಟಿಂಗ್ ಮಾಡ್ಬೇಕು. ಒತ್ತಡವಿಲ್ಲದೇ ಯಾವ ರೀತಿಯಲ್ಲಿ ಬ್ಯಾಟಿಂಗ್ ಮಾಡ್ಬೇಕು ಎಂಬುದರ ಬಗ್ಗೆ ಪಾಠ ಹೇಳಿದ್ದಾರೆ ಎಂಬುದನ್ನು ಬಿಚ್ಚಿಟ್ಟರು.
ಇದನ್ನೂ ಓದಿ: ಉಮ್ರಾನ್ ಮಲಿಕ್ಗೋಸ್ಕರ ತಂದೆಯ ತ್ಯಾಗ.. ETV ಭಾರತ್ ಜೊತೆ ಮನದಾಳ ಬಿಚ್ಚಿಟ್ಟ ಅಬ್ದುಲ್!
ನನ್ನ ಬ್ಯಾಟಿಂಗ್ ಪ್ರತಿಭೆಗೆ ರೋಹಿತ್ ಫಿದಾ: ಮುಂಬೈ ಇಂಡಿಯನ್ಸ್ ಶಿಬಿರದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆ ಅಭ್ಯಾಸ ಮಾಡಿದೆ. ನನ್ನ ಬ್ಯಾಟಿಂಗ್ ನೋಡಿ, ಅವರು ಬೆರಗಾದರು. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ನಿನ್ನಲ್ಲಿ ಅದ್ಭುತ ಪ್ರತಿಭೆ ಇದೆ. ಏಕಾಗ್ರತೆಯಿಂದ ಆಟ ಮುಂದುವರೆಸುವಂತೆ ಸಲಹೆ ನೀಡಿದರು. ಅವರ ಮಾತು ನನಗೆ ಸ್ಫೂರ್ತಿಯಾಯಿತು ಎಂದು ವರ್ಮಾ ಸಂತಸ ಹಂಚಿಕೊಂಡರು.
ಟೀಂ ಇಂಡಿಯಾ ಆಲ್ರೌಂಡರ್ ಆಗುವ ಆಸೆ: 19 ವರ್ಷದೊಳಗಿನ ವಿಶ್ವಕಪ್ ಆಡಿರುವ ಅನುಭವ ಇರುವ ಕಾರಣ, ಐಪಿಎಲ್ನಲ್ಲಿ ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯವಾಯಿತು. ವಿಶ್ವಕಪ್ ವೇಳೆ ಪ್ರೇಕ್ಷಕರಿಲ್ಲದಿದ್ದರೂ ದೇಶಕ್ಕಾಗಿ ಆಡುವ ಒತ್ತಡವಿತ್ತು. ಆದರೆ, ಐಪಿಎಲ್ನಲ್ಲಿ ರೋಹಿತ್ ಶರ್ಮಾ, ಸಚಿನ್ ಸರ್ ಸೇರಿದಂತೆ ಅನೇಕರು ನನ್ನ ಮೇಲಿನ ಒತ್ತಡ ಕಡಿಮೆ ಮಾಡಿದರು. ಮುಂಬರುವ ದಿನಗಳಲ್ಲಿ ಮತ್ತಷ್ಟು ಅದ್ಭುತ ಪ್ರದರ್ಶನ ನೀಡಿ, ಟೀಂ ಇಂಡಿಯಾ ಪರ ಆಲ್ರೌಂಡರ್ ಜವಾಬ್ದಾರಿ ನಿರ್ವಹಿಸುವ ಬಯಕೆ ಇದೆ ಎಂದು ತಿಲಕ್ ವರ್ಮಾ ಹೇಳಿಕೊಂಡಿದ್ದಾರೆ.