ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ನ 2ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 188 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ವಿಕೆಟ್ ಕಳೆದುಕೊಂಡು 18.4 ಓವರ್ಗಳಲ್ಲಿ ಗೆಲುವಿನ ಗುರಿ ಮುಟ್ಟಿತು.
ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್- ಪೃಥ್ವಿ ಶಾ 10ಕ್ಕೂ ಹೆಚ್ಚು ಸರಾಸರಿ ರನ್ ರೇಟ್ನಲ್ಲಿ ಮೊದಲ ವಿಕೆಟ್ಗೆ 138 ರನ್ ಪೇರಿಸಿದರು. ಅಮೋಘ 72 (38) ರನ್ ಚಚ್ಚಿದ ಪೃಥ್ವಿ ಶಾ, ಡ್ವೇನ್ ಬ್ರಾವೋ ಎಸೆತದಲ್ಲಿ ಮೊಯೀನ್ ಅಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 54 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್ ಮೂಲಕ 85 ರನ್ಗಳಿಸಿದ ಧವನ್, ಠಾಕೂರ್ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ನಾಯಕ ರಿಷಭ್ ಪಂತ್ 15 (12) ರನ್ ಪೇರಿಸಿ ತಂಡವನ್ನು ಗೆಲಿವಿನತ್ತ ಕೊಂಡೊಯ್ದರು. ವೇಗವಾಗಿ ಬ್ಯಾಟಿಂಗ್ ಬೀಸಿ ಉತ್ತಮವಾಗಿ ಲಯ ಕಂಡುಕೊಳ್ಳುತ್ತಿದ್ದ ಮಾರ್ಕಸ್ ಸ್ಟೋಯಿನಿಸ್ 14(9) ರನ್ಗಳಿಸಿ ಠಾಕೂರ್ಗೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಡೆಲ್ಲಿ ತಂಡ 3 ವಿಕೆಟ್ ಕಳೆದುಕೊಂಡು 18.4 ಓವರ್ಗಳಲ್ಲಿ 190 ರನ್ಗಳಿಸಿ ಮೂರು ಬಾರಿ ಚಾಂಪಿಯನ್ ತಂಡ ಚೈನ್ನೈ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿ 2021ರ 14ನೇ ಐಪಿಎಲ್ ಆವೃತ್ತಿಯನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಚೆನ್ನೈ ಪರ ಶಾರ್ದುಲ್ ಠಾಕೂರ್ ಎರಡು ಹಾಗೂ ಡ್ವೇನ್ ಬ್ರಾವೋ ಒಂದು ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮೊದಲು ಟಾಸ್ ಸೋತ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಇಳಿದು ಕೇವಲ 7 ರನ್ಗಳಾಗುವಷ್ಟರಲ್ಲಿ ಆರಭಿಕರಾದ ಫಾಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತು. ಆದರೆ 3ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಮೊಯೀನ್ ಅಲಿ ಮತ್ತು ಸುರೇಶ್ ರೈನಾ 53 ರನ್ಗಳ ಜೊತೆಯಾಟ ನೀಡಿದರು. 24 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 36 ರನ್ಗಳಿಸಿದ್ದ ಮೊಯೀನ್ ಅಲಿ, ಅಶ್ವಿನ್ ಓವರ್ನಲ್ಲಿ ಬ್ಯಾಕ್ ಬ್ಯಾಕ್ ಸಿಕ್ಸರ್ ಬಾರಿಸಿ, ನಂತರದ ಎಸೆತದಲ್ಲೇ ಕ್ಯಾಚ್ ಔಟ್ ಆದರು. ನಂತರ ಬಂದ ರಾಯುಡು 16 ಎಸೆತಗಳಲ್ಲಿ 23 ರನ್ಗಳಿಸಿ ಔಟಾದರು.