ಚೆನ್ನೈ (ತಮಿಳುನಾಡು): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 27 ರನ್ಗಳಿಂದ ಗೆಲುವು ದಾಖಲಿಸಿದೆ. ಎಂಎಸ್ ಧೋನಿ ಪಡೆ ನೀಡಿದ್ದ 168 ರನ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ತಂಡ ಎಂಟು ವಿಕೆಟ್ ಕಳೆದುಕೊಂಡು 140 ರನ್ ಮಾತ್ರ ಕಲೆ ಹಾಕಲು ಶಕ್ತವಾಗಿ ಸೋಲೊಪ್ಪಿಕೊಂಡಿತು.
ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಚೆನ್ನೈ ಪರ ಇದುವರೆಗೂ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ನಿರಂತರವಾಗಿ 50ಕ್ಕೂ ಅಧಿಕ ರನ್ಗಳ ಜೊತೆಯಾಟ ನೀಡುತ್ತಾ ಬಂದಿದ್ದರು. ಆದರೆ, ಇಂದಿನ ಪಂದ್ಯದಲ್ಲಿ ಆರಂಭಿಕರು ವೈಫಲ್ಯ ಅನುಭವಿಸಿದರು.
ಆರಂಭಿಕ ಡೆವೊನ್ ಕಾನ್ವೇ 10 ರನ್ ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ರುತುರಾಜ್ ಗಾಯಕ್ವಾಡ್ (24), ಮೊಯಿನ್ ಅಲಿ (7) ಸಹ ಬೇಗ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಜಿಂಕ್ಯಾ ರಹಾನೆ ಮತ್ತು ದುಬೆ ಸ್ವಲ್ಪ ಹೊತ್ತು ವಿಕೆಟ್ ಕಾಯ್ದುಕೊಂಡರೂ ಸಹೆ ಅಬ್ಬರದ ರನ್ ಗಳಿಸುವಲ್ಲಿ ವಿಫಲರಾದರು. 21 ರನ್ಗೆ ರಹಾನೆ ಔಟ್ ಆದರೆ, ಶಿವಂ ದುಬೆ 25 ರನ್ ಬಾರಿಸಿ ಪೆವಿಲಿಯನ್ಗೆ ಮರಳಿದರು.
ನಂತರ ಅಂಬಾಟಿ ರಾಯುಡು 23 ಹಾಗೂ ಜಡೇಜಾ 21 ರನ್ಗೆ ವಿಕೆಟ್ ಒಪ್ಪಿಸಿದರು. ನಾಯಕ ಧೋನಿ 9 ಎಸೆತಗಳಲ್ಲಿ 20 ರನ್ ಕಲೆ ಹಾಕಿ ಔಟಾದರು. ಅಂತಿಮವಾಗಿ ಚೆನ್ನೈ ತಂಡ 20 ಓವರ್ ಅಂತ್ಯಕ್ಕೆ 8 ಕಳೆದುಕೊಂಡು 167 ರನ್ಗಳನ್ನು ಪೇರಿಸಿತು. ಡೆಲ್ಲಿ ಪರ ಮಿಚೆಲ್ ಮಾರ್ಷ್ 3, ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು. ಖಲೀಲ್ ಅಹ್ಮದ್, ಕುಲದೀಪ್ ಯಾದವ್ ಮತ್ತು ಲಲಿತ್ ಯಾದವ್ ತಲಾ ಒಂದು ವಿಕೆಟ್ ಕಬಳಿಸಿದರು.
ಈ ಗುರಿ ಬೆನ್ನಟ್ಟಿ ಡೆಲ್ಲಿ ತಂಡಕ್ಕೂ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್ ಡಕೌಟ್ ಆದರು. ಈ ಮೂಲಕ ಮೊದಲ ಓವರ್‌ನ 2ನೇ ಎಸೆತದಲ್ಲೇ ಡೆಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಫಿಲಿಪ್ ಸಾಲ್ಟ್ ಹಾಗೂ ಮಿಚೆಲ್ ಮಾರ್ಶ್ ಜೋಡಿಯೂ ಹೆಚ್ಚು ಹೊತ್ತು ನಿಲ್ಲಿಲ್ಲ. ಸಾಲ್ಟ್ 17 ರನ್ ಸಿಡಿಸಿ ನಿರ್ಗಮಿಸಿದರೆ, ಮಾರ್ಶ್ 5 ರನ್ಗೆ ಪೆವಿಯಲಿಯನ್ ಸೇರಿದರು.
ಇದರ ನಡುವೆ ಮನೀಶ್ ಪಾಂಡೆ ಹಾಗೂ ರೀಲೆ ರೊಸೊ ಜೊತೆಯಾಟದಿಂದ ಡೆಲ್ಲಿ ತಂಡ ಚೇತರಿಸಿಕೊಂಡಿತು. ಆದರೆ, ಬಿರುಸಿನಿಂದ ಬ್ಯಾಟ್ ಬೀಸಿಲಿಲ್ಲ. ಪಾಂಡೆ 29 ಎಸೆತ ಎದುರಿಸಿದರೂ ಕೇವಲ 27 ರನ್ಗೆ ಎಲ್ಬಿ ಬಲೆಗೆ ಬಿದ್ದರು. ರಿಲೋ ರೂಸೋ 37 ಬಾಲ್ಗಳಲ್ಲಿ 35 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ದಿಟ್ಟ ಹೋರಾಟ ನೀಡಿದ ಅಕ್ಸರ್ ಪಟೇಲ್ 12 ಎಸೆತದಲ್ಲಿ 21 ರನ್ ಸಿಡಿಸಿ ನಿರ್ಗಮಿಸಿದರು. ಲಲಿತ್ ಯಾದವ್ (12) ಹೋರಾಟ ಸಾಕಾಗಲಿಲ್ಲ. ಕೊನೆಗೆ ಡೆಲ್ಲಿ ಎಂಟು ವಿಕೆಟ್ ನಷ್ಟಕ್ಕೆ 140 ರನ್ ಮಾತ್ರ ಸಿಡಿಸಿತು. ಇದರೊಂದಿಗೆ ಚನ್ನೈ 27 ರನ್ಗಳಿಂದ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ 15 ಅಂಕದೊಂದಿಗೆ ಪಟ್ಟಿಯಲ್ಲಿ ಚೆನ್ನೈ ಎರಡನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: IPLನಲ್ಲಿ ಇಂದು: ಡೆಲ್ಲಿ ಕ್ಯಾಪಿಟಲ್ಸ್‌ಗೆ ಉಳಿವಿನ ಹೋರಾಟ, ಪ್ಲೇ ಆಫ್ ಮೇಲೆ ಚೆನ್ನೈ ಕಣ್ಣು