ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಆಲ್‌ರೌಂಡರ್ ಅಂಕಿತ ಚೌಹಾಣ್ ಅವರ ನಿಷೇಧದ ಅವಧಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಕ್ತಾಯಗೊಳಿಸಿದೆ.
2013ರ ಐಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಸಂಬಂಧ ಅಂಕಿತ ಚವಾಣ್ ಅವರೊಂದಿಗೆ ಎಸ್. ಶ್ರೀಶಾಂತ್ ಹಾಗೂ ಅಜಿತ್ ಚಾಂಡಿಲಾ ಅವರು ಕೂಡ ಭಾರತದ ಎಲ್ಲಾ ಸ್ವರೂಪದ ಕ್ರಿಕೆಟ್‌ನಿಂದ ಬ್ಯಾನ್ ಆಗಿದ್ದರು. 2020ರ ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಮೇಲೆ ಹೇರಿರುವ ಶಿಕ್ಷೆಯನ್ನು ತೆರವುಗೊಳಿಸಬೇಕೆಂದು ಬಾಂಬೆ ಹೈಕೋರ್ಟ್‌ಗೆ ಅಂಕಿತ ಚವಾಣ್ ಮನವಿ ಮಾಡಿಕೊಂಡಿದ್ದರು. ಈ ಪ್ರಕರಣವನ್ನು ಬಿಸಿಸಿಐ ಒಂಬುಡ್ಸ್‌ಮನ್ ಡಿಕೆ ಜೈನ್ ಅವರಿಗೆ ಉಲ್ಲೇಖಿಸಿದ ಬಳಿಕ ಅವರ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ.
"ಬಾಂಬೆ ಹೈಕೋರ್ಟ್‌ನ ನಿರ್ದೇಶನದಂತೆ, 2013ರ ಸೆಪ್ಟೆಂಬರ್ 13 ರಿಂದ ನಿಮ್ಮ ಮೇಲೆ ಬಿಸಿಸಿಐ ಹೇರಿರುವ ಜೀವಿತಾವಧಿ ಶಿಕ್ಷೆಯು 2021ರ ಸೆಪ್ಟೆಂಬರ್ ತಿಂಗಳಲ್ಲಿ ಅಂತ್ಯವಾಗಲಿದೆ. ಆ ಮೂಲಕ ನಿಮ್ಮ ಶಿಕ್ಷೆಯು 7 ವರ್ಷಗಳಿಗೆ ಅಂತ್ಯವಾಗಲಿದೆ. 2021ರ ಮೇ 3 ರಂದೇ ನಿಮಗೆ ಈ ಆದೇಶ ನೀಡಲಾಗಿದೆ." ಎಂದು ಬಿಸಿಸಿಐ ತಿಳಿಸಿದೆ.
ಕಳೆದ ವರ್ಷ ಕೇರಳ ಮೂಲದ ವೇಗಿ ಎಸ್. ಶ್ರೀಶಾಂತ್ ಅವರೂ ಕೂಡ ಜೀವಿತಾವಧಿ ಶಿಕ್ಷೆಯಿಂದ ಹೊರ ಬಂದಿದ್ದರು ಹಾಗೂ ಕೇರಳ ಪರ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ, 2021ರ ಆವೃತ್ತಿಯ ಐಪಿಎಲ್ ಟೂರ್ನಿಯ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಶ್ರೀಶಾಂತ್ ವಿಫಲರಾಗಿದ್ದರು.
ಅಂಕಿತ ಚವಾಣ್ 20 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, 254 ರನ್ ಹಾಗೂ 18 ವಿಕೆಟ್‌ಗಳನ್ನು ಕಬಳಿಸಿದರೆ, ಇನ್ನು 18 ಪ್ರಥಮ ದರ್ಜೆ ಪಂದ್ಯಗಳಿಂದ 571 ರನ್ ಹಾಗೂ 53 ವಿಕೆಟ್ ಪಡೆದುಕೊಂಡಿದ್ದಾರೆ.