ಮುಂಬೈ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ಗೂ ಮುನ್ನ ಬೃಹತ್ ಹರಾಜು ಪ್ರಕ್ರಿಯೆ ನಡೆಯಲಿದೆ. ಐಪಿಎಲ್ ಮಂಡಳಿ ಶುಕ್ರವಾರ ಫ್ರಾಂಚೈಸಿಗಳು 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ. ಗರಿಷ್ಠ ಮೂವರು ಭಾರತೀಯ ಆಟಗಾರರು ಮತ್ತು ಒಬ್ಬ ವಿದೇಶಿ ಅಥವಾ ಇಬ್ಬರು ವಿದೇಶಿ ಮತ್ತು ಸ್ವದೇಶಿ ಆಟಗಾರ ಸಂಯೋಜನೆಯಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಿದೆ.
ಇತರೆ ತಂಡಗಳಿಗೆ ಹೋಲಿಸಿಕೊಂಡರೆ ಆರ್ಸಿಬಿಗೆ ರೀಟೈನ್ ಮಾಡಿಕೊಳ್ಳುವ ವಿಚಾರದಲ್ಲಿ ದೊಡ್ಡ ತಲೆನೋವಾಗಲಿದೆ. ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಗ್ಲೇನ್ ಮ್ಯಾಕ್ಸ್ವೆಲ್, ಎಬಿ ಡಿ ವಿಲಿಯರ್ಸ್, ಯುಜ್ವೇಂದ್ರ ಚಹಲ್ ಮತ್ತು ಮೊಹಮ್ಮದ್ ಸಿರಾಜ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಫ್ರಾಂಚೈಸಿಗೆ ಖಂಡಿತ ಈ ಆರು ಮಂದಿಯಲ್ಲಿ ಯಾರನ್ನು ಬಿಟ್ಟುಕೊಡುವ ಮನಸಿಲ್ಲವಾದರೂ, ಅನಿವಾರ್ಯವಾಗಿ ಮೆಗಾ ಹರಾಜಿಗೆ ಕೇವಲ 4 ಮಂದಿಯನ್ನು ಮಾತ್ರ ಉಳಿಸಿಕೊಳ್ಳಬೇಕಾಗಿದೆ.
ವಿರಾಟ್ ಕೊಹ್ಲಿ ಆರ್ಸಿಬಿಯ ಮೊದಲ ರೀಟೈನ್ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ಮೂರು ವರ್ಷಗಳ ಕಾಲ ತಂಡದ ಹಿತದೃಷ್ಟಿಯಿಂದ ನೋಡುವುದಾದರೆ ಸಿರಾಜ್ ಮತ್ತು ಪಡಿಕ್ಕಲ್ ತಂಡಕ್ಕೆ ಅವಶ್ಯಕವಾಗಿದ್ದಾರೆ. ಇವರಿಬ್ಬರ ಜೊತೆಗೆ ಚಹಾಲ್ ಕೂಡ ದೇಶಿ ಆಟಗಾರರ ಸಾಲಿನಲ್ಲಿರುವ ಪ್ರಮುಖ ಆಟಗಾರನಾಗಿದ್ದಾರೆ.
ಮ್ಯಾಕ್ಸ್ವೆಲ್ vs ಎಬಿ ಡಿ ವಿಲಿಯರ್ಸ್
ವಿದೇಶಿ ಆಟಗಾರರ ಪಟ್ಟಿಯಲ್ಲಿ ಎಬಿಡಿ ಮತ್ತು ಮ್ಯಾಕ್ಸ್ವೆಲ್ ಆರ್ಸಿಬಿ ಉಳಿಸಿಕೊಳ್ಳಲು ಬಯಸುವ ಆಟಗಾರರು. ಆದರೆ ಎಬಿಡಿ ಫಾರ್ಮ್ ಮತ್ತು ಅವರ ವಯಸ್ಸು ಅವರನ್ನು ಮುಂದಿನ 3 ವರ್ಷಗಳಲ್ಲಿ ಫ್ರಾಂಚೈಸಿಗೆ ಆಡಬಲ್ಲರೇ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಂಡಾಗ ಅವರನ್ನು ರೀಟೈನ್ ಮಾಡಿಕೊಳ್ಳುವುದು ಕಷ್ಟವಾಗಲಿದೆ. ಆದರೆ ಎಬಿಡಿ 14ನೇ ಆವೃತ್ತಿಯಲ್ಲಿ ದ್ವಿತೀಯಾರ್ಧದಲ್ಲಿ ಸ್ಥಿರ ಪ್ರದರ್ಶನ ತೋರದಿದ್ದಕ್ಕೆ ಮಾತ್ರ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ತೆಗೆದುಕೊಳ್ಳುವುದು ಕೂಡ ಕಷ್ಟವಾಗಲಿದೆ.
ಮ್ಯಾಕ್ಸ್ವೆಲ್ 2021ರ ಆವೃತ್ತಿಯಲ್ಲಿ ಆರ್ಸಿಬಿಯ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದಾರೆ. ಇವರನ್ನು ಬಿಟ್ಟರೆ ಮತ್ತೆ ಖಂಡಿತ ಖರೀದಿಸಲು ಅಸಾಧ್ಯವಾಗಬಹುದು. ಏಕೆಂದರೆ ಮುಂದಿನ ವರ್ಷದಿಂದ ಎರಡು ಹೊಸ ತಂಡಗಳು ಸೇರಿಕೊಳ್ಳುವುದರಿಂದ ಮ್ಯಾಕ್ಸ್ವೆಲ್ರನ್ನು ಮತ್ತೆ ಖರೀದಿಸಿವುದು ನಿಜಕ್ಕೂ ಅಸಾಧ್ಯವೇ ಸರಿ. ಹಾಗಾಗಿ ಫ್ರಾಂಚೈಸಿ ಯಾರ ಪರ ಹೋಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಒಂದು ವೇಳೆ ಮ್ಯಾಕ್ಸ್ವೆಲ್ ಮತ್ತು ಎಬಿಡಿ ಇಬ್ಬರನ್ನೂ ರೀಟೈನ್ ಮಾಡಿಕೊಂಡರೆ, ಪಡಿಕ್ಕಲ್, ಸಿರಾಜ್ ಮತ್ತು ಚಹಾಲ್ ಈ ಮೂವರಲ್ಲಿ ಇಬ್ಬರನ್ನು ಬಿಟ್ಟುಕೊಡಬೇಕಾಗುತ್ತದೆ.
ಒಟ್ಟಿನಲ್ಲಿ ಮೇಲೆ ಹೆಸರಿಸಿರುವ ಆರು ಆಟಗಾರರಲ್ಲಿ ಯಾರನ್ನೇ ಹರಾಜಿಗೆ ಬಿಟ್ಟರೂ ಆರ್ಸಿಬಿ ಮತ್ತೆ ಬಿಡ್ ಮೂಲಕ ಖರೀದಿಸಲು ದೊಡ್ಡ ಮೊತ್ತವನ್ನೇ ನೀಡಬೇಕಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಬೆಂಗಳೂರು ಫ್ರಾಂಚೈಸಿ ಯಾವ ಆಟಗಾರನನ್ನು ಉಳಿಸಿಕೊಳ್ಳಲಿದೆ ಎನ್ನುವುದು ಭಾರಿ ಕೂತೂಹಲ ಮೂಡಿಸಿದೆ.
ಇದನ್ನು ಓದಿ:ಬುಮ್ರಾ ಬೆಸ್ಟ್ ಟಿ20 ಬೌಲರ್, ಆತನ ಜೊತೆ ಶಾಹೀನ್ ಅಫ್ರಿದಿ ಹೋಲಿಕೆ ಮೂರ್ಖತನ: ಅಮೀರ್