ಮುಂಬೈ (ಮಹಾರಾಷ್ಟ್ರ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2023ರಿಂದ 2027ರವರೆಗಿನ ಮೀಡಿಯಾ ಹಕ್ಕುಗಳು ಮಾರಾಟವಾಗಿದೆ. ಡಿಸ್ನಿ ಸ್ಟಾರ್ ಟಿವಿ ಹಕ್ಕುಗಳನ್ನು ಉಳಿಸಿಕೊಂಡಿದ್ದರೆ, ವಯಾಕಾಮ್-18 ಡಿಜಿಟಲ್ ಹಕ್ಕುಗಳನ್ನು ಪಡೆದಿದ್ದು, ಒಟ್ಟಾರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ 48,390 ಕೋಟಿ ರೂ. ಆದಾಯ ಬರಲಿದೆ ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.
ಐಪಿಎಲ್ ಮೀಡಿಯಾ ಹಕ್ಕುಗಳಿಗಾಗಿ ಬಿಸಿಸಿಐ ಮೂರು ದಿನಗಳ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಸ್ಟಾರ್ ಟಿವಿ (ಪ್ಯಾಕೇಜ್-ಎ) ಹಕ್ಕುಗಳನ್ನು 23,575 ಕೋಟಿ ರೂ. (ಪ್ರತಿ ಪಂದ್ಯಕ್ಕೆ 57.5 ಕೋಟಿ)ಗಳಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅದೇ ರೀತಿಯಾಗಿ ವಯಾಕಾಮ್ 23,758 ಕೋಟಿ ರೂ.ಗಳಿಗೆ ಡಿಜಿಟಲ್ ಹಕ್ಕುಗಳನ್ನು (ಪ್ಯಾಕೇಜ್-ಬಿ, ಸಿ) ಪಡೆದಿದೆ. ಅಲ್ಲದೇ, ಆಸ್ಟ್ರೇಲಿಯಾ, ಸೌಥ್ ಆಫ್ರಿಕಾ ಮತ್ತು ಯುಕೆ ಪ್ರದೇಶದ ಹಕ್ಕುಗಳನ್ನು (ಪ್ಯಾಕೇಜ್-ಡಿ) ಸಾಧಿಸಿದೆ. ಟೈಮ್ಸ್ ಇಂಟರ್ನೆಟ್ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಹಾಗೂ ಅಮೆರಿಕಾದಲ್ಲಿ ಪ್ರಸಾರದ ಹಕ್ಕುಗಳನ್ನು ಪಡೆದಿದೆ.
ಒಟ್ಟಾರೆ 48,390 ಕೋಟಿ ರೂ.ಗಳು ಪ್ರಸಾರ ಹಕ್ಕಾಗಿದ್ದು, ಭಾರತೀಯ ಕ್ರೀಡಾ ಪ್ರಸಾರ ಉದ್ಯಮದಲ್ಲೇ ಅಭೂತಪೂರ್ವ ಆದಾಯವಾಗಿದೆ. ಇಷ್ಟೇ ಅಲ್ಲ, ಕಳೆದ 2018-22ನೇ ಸಾಲಿನಲ್ಲಿ ಮೀಡಿಯಾ ಹಕ್ಕುಗಳಿಗೆ ಹೋಲಿಕೆ ಮಾಡಿದರೆ ಇದು ಮೂರು ಪಟ್ಟು ಅಧಿಕ. 2017ರಲ್ಲಿ 16,347.50 ಕೋಟಿ ರೂ.ಗಳಿಗೆ ಬಿಸಿಸಿಐ ಪ್ರಸಾರಗಳನ್ನು ಮಾರಾಟ ಮಾಡಿತ್ತು. ಈಗಿನ ಮೌಲ್ಯ ಗಮನಿಸಿದರೆ ಐಪಿಎಲ್ ಅನಿರೀಕ್ಷಿತ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ ಎಂಬುವುದೂ ಸಾಬೀತಾಗಿದೆ.
ಟಿವಿಗಿಂತಲೂ ಡಿಜಿಟಲ್ ಹೆಚ್ಚು ಮೌಲ್ಯ: ಐಪಿಎಲ್ ಪ್ರಸಾರ ಹಕ್ಕುಗಳ ಮಾರಾಟದಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಭಾರತದಲ್ಲಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆ ಮತ್ತು ಅದರ ಮಾರುಕಟ್ಟೆಯ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತಿದೆ. ಯಾಕೆಂದರೆ, ಟಿವಿ ಹಕ್ಕುಗಳಿಂತ ಅಧಿಕ ಡಿಜಿಟಲ್ ಹಕ್ಕುಗಳು ಮಾರಾಟವಾಗಿದೆ. ಟಿವಿ ಹಕ್ಕುಗಳನ್ನು ಸ್ಟಾರ್ 23,575 ಕೋಟಿ ರೂ.ಗೆ ಪಡೆದಿದ್ದರೆ, ವಯಾಕಾಮ್ ಡಿಜಿಟಲ್ ಹಕ್ಕುಗಳನ್ನು 23,758 ಕೋಟಿ ರೂ.ಗಳಿಗೆ ಬಿಡ್ ಮಾಡಿದೆ. ಅಂದರೆ 183 ಕೋಟಿ ರೂ.ಗಳಷ್ಟು ಅಧಿಕ ಮೌಲ್ಯಕ್ಕೆ ಡಿಜಿಟಲ್ ಹಕ್ಕುಗಳು ಮಾರಾಟಗೊಂಡಿವೆ.
ನಾನು ಥ್ರಿಲ್ ಆಗಿದ್ದೇನೆ: ಐಪಿಎಲ್ ಪ್ರಸಾರ ಹಕ್ಕುಗಳ ಮಾರಾಟದ ಬಗ್ಗೆ ಅಧಿಕೃತವಾಗಿ ಘೋಷಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಸ್ಟಾರ್ ಇಂಡಿಯಾ ಟಿವಿ ಹಕ್ಕುಗಳನ್ನು ಗೆದ್ದಿರುವ ಬಗ್ಗೆ ಘೋಷಿಸಲು ಥ್ರಿಲ್ ಆಗಿದ್ದೇನೆ. ಜೊತೆಗೆ ಎರಡು ವರ್ಷ ಕೋವಿಡ್ ಸಾಂಕ್ರಾಮಿಕ ಹೊರತಾಗಿಯೂ ಬಿಸಿಸಿಐನ ಸಾಂಸ್ಥಿಕ ಸಾಮರ್ಥ್ಯಗಳಿಗೆ ಬಿಡ್ ನೇರ ಸಾಕ್ಷಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ವಯಾಕಾಮ್-18 ಡಿಜಿಟಲ್ ಹಕ್ಕುಗಳನ್ನು 23,758 ಕೋಟಿ ರೂ.ಗಳಿಗೆ ಗೆದ್ದಿದೆ. ಇದು ಭಾರತದ ಡಿಜಿಟಲ್ ಕ್ರಾಂತಿಯನ್ನು ತೋರಿಸುತ್ತದೆ. ಡಿಜಿಟಲ್ ಕ್ಷೇತ್ರವು ಅಂತ್ಯವಿಲ್ಲದ ಸಾಮರ್ಥ್ಯ ಹೊಂದಿದೆ ಎಂಬುವುದು ರುಜುವಾತು ಮಾಡಿದೆ. ಅಲ್ಲದೇ, ಕ್ರಿಕೆಟ್ ನೋಡುವ ವಿಧಾನವನ್ನೇ ಡಿಜಿಟಲ್ ಬದಲಾಯಿಸಿದೆ. ಇದು ಕ್ರಿಕೆಟ್ನಲ್ಲಿನ ಬೆಳವಣಿಗೆ ಮತ್ತು ಡಿಜಿಟಲ್ ಇಂಡಿಯಾ ದೃಷ್ಟಿಯಲ್ಲಿ ದೊಡ್ಡ ಅಂಶವಾಗಿದೆ ಎಂದು ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಗಮನಾರ್ಹ ಅಂಶವೆಂದರೆ ಮೊದಲ ಬಾರಿಗೆ ಬಿಸಿಸಿಐ ಐಪಿಎಲ್ನ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ವಿಭಜಿಸಿದೆ. ಜೊತೆಗೆ ಬಿಡ್ಡರ್ಗಳಿಗೆ ನಾಲ್ಕು ಪ್ಯಾಕೇಜ್ಗಳನ್ನು ನೀಡಿತ್ತು. 'ಎ' ವಿಭಾಗದಲ್ಲಿ ಟಿವಿ ಮತ್ತು 'ಬಿ' ವಿಭಾಗದಲ್ಲಿ ಡಿಜಿಟಲ್ ಹಕ್ಕು ಭಾರತದ ಉಪ ಖಂಡಗಳು, 'ಸಿ' ವಿಭಾಗದಲ್ಲಿ ಇಂಡಿಯಾ ಡಿಜಿಟಲ್ ನಾನ್-ಎಕ್ಸ್ಕ್ಲೂಸಿವ್ ವಿಶೇಷ ಪ್ಯಾಕೇಜ್ ಹಾಗೂ 'ಡಿ' ವಿಭಾಗದಲ್ಲಿ ಪ್ರಪಂಚದ ಉಳಿದ ಭಾಗಗಳ ಪ್ರಸಾರ ಹಕ್ಕು ಕೊಟ್ಟಿತ್ತು.