ಮುಂಬೈ : 2022ರ ಐಪಿಎಲ್ಗೆ 2 ಹೊಸ ತಂಡಗಳ ಸೇರ್ಪಡೆಯಾಗಿದೆ. ಇದೀಗ ಬಿಸಿಸಿಐ ಆಟಗಾರರ ರೀಟೈನ್ ಯೋಜನೆಯನ್ನು ಘೋಷಿಸಿದೆ. ಹಳೆಯ 8 ಫ್ರಾಂಚೈಸಿಗಳು ತಲಾ 4 ಆಟಗಾರರನ್ನು, ಹೊಸದಾಗಿ ಸೇರ್ಪಡೆಗೊಂಡಿರುವ ಎರಡೂ ತಂಡಗಳು ಮೂರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ಅನುಮತಿ ಮಾಡಿದೆ.
"8 ಫ್ರಾಂಚೈಸಿಗಳು ಮೊದಲು ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ನಂತರ ಎರಡು ಹೊಸ ತಂಡಗಳು ತಮಗೆ ಬೇಕಾದ 3 ಆಟಗಾರರನ್ನು ಹರಾಜಿಗೂ ಮುನ್ನ ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದು" ಎಂದು ಬಿಸಿಸಿಐ ಶನಿವಾರ ಫ್ರಾಂಚೈಸಿಗಳಿಗೆ ಮೇಲ್ ಮಾಡಿದೆ.
2022ರ ಐಪಿಎಲ್ ಆವೃತ್ತಿಯಲ್ಲಿ ತಂಡದ ವೇತನ 90 ಕೋಟಿ ರೂ. ಇರಲಿದೆ ಎಂದು ಬಿಸಿಸಿಐ ಇದೇ ವೇಳೆ ಖಚಿತಪಡಿಸಿದೆ. ನವೆಂಬರ್ 1ರಿಂದ 31ರ ಒಳಗೆ 8 ಫ್ರಾಂಚೈಸಿಗಳು ತಾವೂ ಉಳಿಸಿಕೊಳ್ಳುವ 4 ಆಟಗಾರರನ್ನು ಘೋಷಿಸಬೇಕು. ನಂತರ ಹೊಸ ತಂಡಗಳು ಡಿಸೆಂಬರ್ 1ರಿಂದ 25ರೊಳಗೆ ತಾವೂ ಆಯ್ಕೆ ಮಾಡಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಸಲ್ಲಿಸಬೇಕೆಂದು ಮೇಲ್ನಲ್ಲಿ ತಿಳಿಸಿದೆ.
ಅಲ್ಲದೆ ಫ್ರಾಂಚೈಸಿಗಳು 4 ಆಟಗಾರರಲ್ಲಿ ಗರಿಷ್ಠ 3 ದೇಶಿ ಮತ್ತು ಒಬ್ಬ ವಿದೇಶಿ ಆಟಗಾರನ್ನು ಅಥವಾ ಗರಿಷ್ಠ ತಲಾ 2 ದೇಶಿ ಮತ್ತು ವಿದೇಶಿ ಆಟಗಾರರ ಸಂಯೋಜನೆಯಲ್ಲಿ ರೀಟೈನ್ ಮಾಡಿಕೊಳ್ಳಲು ಮಾತ್ರ ಅವಕಾಶವಿದೆ. ಇನ್ನು 2ಕ್ಕಿಂತ ಹೆಚ್ಚು ಅನ್ಕ್ಯಾಪಡ್ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಬೋರ್ಡ್ ಖಚಿತಪಡಿಸಿದೆ.
ಹೊಸ ತಂಡಗಳು ಇಬ್ಬರು ದೇಶಿ ಆಟಗಾರರನ್ನು ಮತ್ತು ಒಬ್ಬ ವಿದೇಶಿ ಆಟಗಾರರನ್ನು ಮಾತ್ರ ಖರೀದಿಸಬಹುದಾಗಿದೆ. ದೇಶಿ ಆಟಗಾರರಲ್ಲಿ ಒಬ್ಬ ಅನ್ಕ್ಯಾಪಡ್ ಆಟಗಾರರನ್ನು ಖರೀದಿಸಲು ಮಾತ್ರ ಅವಕಾಶವಿದೆ.
ಸ್ಯಾಲರಿ ಕ್ಯಾಪ್ ಹೀಗಿರಲಿದೆ : ಪ್ರತಿ ಫ್ರಾಂಚೈಸಿಗಳಿಗೆ ತಲಾ 90 ಕೋಟಿ ರೂ ನೀಡಲಾಗಿದೆ. ಇದರಲ್ಲಿ 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಯಸುವ ಫ್ರಾಂಚೈಸಿಗಳು 42 ಕೋಟಿ ರೂಗಳನ್ನು ಬಳಸಿಕೊಳ್ಳಬಹುದಾಗಿದೆ.
3 ಆಟಗಾರರನ್ನು ರೀಟೈನ್ ಮಾಡಿಕೊಂಡರೆ 33 ಕೋಟಿ ರೂ. ಇಬ್ಬರು ಆಟಗಾರರನ್ನು ರೀಟೈನ್ ಮಾಡಿಕೊಂಡರೆ 24 ಮತ್ತು ಕೇವಲ ಒಬ್ಬನೇ ಆಟಗಾರನನ್ನ ರೀಟೈನ್ ಮಾಡಿಕೊಂಡರೆ 14 ಕೋಟಿ ರೂ.ಗಳನ್ನು ಮಾತ್ರ ಬಳಿಸಿಕೊಳ್ಳಲು ಅನುಮತಿ ನೀಡಲಾಗಿದೆ.
4 ಆಟಗಾರರನ್ನು ರೀಟೈನ್ ಮಾಡಿಕೊಂಡರೆ, ಮೊದಲನೇ ಆಟಗಾರ 16, 2ನೇ ಆಟಗಾರ 12, 3ನೇ ಆಟಗಾರ 8, 4ನೇ ಆಟಗಾರ 6 ಕೋಟಿ ರೂ. ಪಡೆಯಲಿದ್ದಾರೆ.
3 ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಫ್ರಾಂಚೈಸಿ, 15, 11 ಮತ್ತು 7 ಕೋಟಿ ರೂ. ಗಳನ್ನು ಬಳಸಿಕೊಳ್ಳಬಹುದು. ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 14 ಕೋಟಿ ಮತ್ತು 10 ಕೋಟಿ ರೂ.ಗಳನ್ನು ಮತ್ತು ಒಬ್ಬ ಆಟಗಾರನನ್ನು ಉಳಿಸಿಕೊಂಡರೆ 14 ಕೋಟಿ ರೂ.ಗಳನ್ನು ವೆಚ್ಚ ಮಾಡಬಹುದಾಗಿದೆ.
ಇದನ್ನು ಓದಿ:ಹಸರಂಗ ಹ್ಯಾಟ್ರಿಕ್: ಏಕದಿನ ಮತ್ತು ಟಿ20 ಎರಡರಲ್ಲೂ ಈ ಸಾಧನೆ ಮಾಡಿದ 4ನೇ ಬೌಲರ್!