ಮುಂಬೈ: ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾರನ್ನು 2022ರ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸುವುದಕ್ಕೆ ಮುಂದಾಗದೇ ಇರುವುದಕ್ಕೆ ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಹಿಂದಿನ 14 ಆವೃತ್ತಿಗಳಲ್ಲಿ 13ರಲ್ಲಿ ಆಡಿರುವ ರೈನಾ ಐಪಿಎಲ್ ಇತಿಹಾಸದಲ್ಲಿ 4ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಆದರೆ, ಶನಿವಾರ ಮತ್ತು ಭಾನುವಾರ ನಡೆದ ಮೆಗಾ ಹರಾಜಿನಲ್ಲಿ ಸಿಎಸ್ಕೆ ಆಗಲಿ ಅಥವಾ ಯಾವುದೇ ಬೇರೆ ಫ್ರಾಂಚೈಸಿಗಳಾಗಲೀ ಅವರ ಮೇಲೆ ಬಿಡ್ ಮಾಡಲಿಲ್ಲ. ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಪಠಾಣ್ ಕೆಲವು ವಿದೇಶಿ ಆಟಗಾರರು 40 ಆದರೂ ಇನ್ನೂ ಐಪಿಎಲ್ನಲ್ಲಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ, 35 ವರ್ಷದ ರೈನಾರನ್ನು ಆಯ್ಕೆ ಮಾಡದಿರುವುದರ ಹಿಂದಿನ ಮರ್ಮವೇನು ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ರೈನಾ ಅವರನ್ನು ಯಾವುದಾದರೂ ತಂಡ ಖರೀದಿಸಬಹುದಿತ್ತು ಎಂದು ನಾನು ಭಾವಿಸುತ್ತಿದ್ದೇನೆ. ಕೆಲವು ವಿದೇಶಿ ಆಟಗಾರರು 40 ವರ್ಷಗಳವರೆಗೂ ಐಪಿಎಲ್ನಲ್ಲಿ ಆಡಿದ್ದನ್ನು ನೋಡಿದ್ದೇವೆ. ರೈನಾಗೆ ಇನ್ನೂ 35 ವರ್ಷ. ಒಂದು ಕೆಟ್ಟ ಆವೃತ್ತಿಯನ್ನಷ್ಟೇ ಕಂಡಿದ್ದಾರೆ ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನಲ್ಲಿ ಧೋನಿಯಷ್ಟೇ ಪಾತ್ರವನ್ನು ಹೊಂದಿದ್ದರು. ಅವರು ಬಹುಪಾಲು ಆವೃತ್ತಿಗಳಲ್ಲಿ 400+ ರನ್ಗಳಿಸಿದ್ದರು. ಆದರೆ, 2021ರಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದ ಅವರು ಕೊನೆಯ ನೌಕೌಟ್ ಪಂದ್ಯಗಳಿಂದ ಹೊರಬಿದ್ದಿದ್ದರು. ಧೋನಿಯ ಪರಮಾಪ್ತರಾಗಿದ್ದ ರೈನಾರನ್ನು ಮೂಲಬೆಲೆಗಾದರೂ ಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸಿಎಸ್ಕೆ ಮ್ಯಾನೇಜ್ ಮೆಂಟ್ ಚಿನ್ನ ತಲಾ ಎಂದೇ ಖ್ಯಾತರಾಗಿದ್ದ ರೈನಾ ಕಡೆಗೆ ಬಿಡ್ ಮಾಡಲು ಮನಸ್ಸು ಮಾಡಲಿಲ್ಲ, ಬೇರೆ ತಂಡಗಳೂ ಆಸಕ್ತಿ ತೋರಿಸದೇ ಇರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.
ಇದನ್ನೂ ಓದಿ:ಗುಡಿಸಿಲಿನಲ್ಲಿ ವಾಸ, 9 ವರ್ಷ ಪ್ಲಂಬರ್ ಆಗಿ ಕೆಲಸ.. ಅದೇ ಯುವಕನಿಗೆ ಸಿಕ್ತು ರಣಜಿ ತಂಡದಲ್ಲಿ ಚಾನ್ಸ್!