ನವದೆಹಲಿ: ಕಾರು ಅಪಘಾತದಲ್ಲಿ ಟೀಂ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಆದರೆ, ಸಂಪೂರ್ಣವಾಗಿ ಫಿಟ್ ಆಗಲು ಹಲವು ದಿನಗಳೇ ಬೇಕಾಗುತ್ತದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ. ಇದರ ನಡುವೆ ಅನೇಕ ಕ್ರಿಕೆಟ್ ಸರಣಿಗಳಿಂದ ಪಂತ್ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ. ಇದರಲ್ಲೂ, ಜನಪ್ರಿಯ ಚುಟುಕು ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್ ಬಗ್ಗೆ ಸಾಕಷ್ಟು ಚಿಂತಿತವಾಗಿದೆ.
ಇದನ್ನೂ ಓದಿ: ಟಿ20ಗೆ ಸೂರ್ಯ, ಏಕದಿನದಲ್ಲಿ ಅಯ್ಯರ್, ಟೆಸ್ಟ್‌ನಲ್ಲಿ ಪಂತ್: ಕಳೆದ ವರ್ಷದ ಬೆಸ್ಟ್ ಕ್ರಿಕೆಟರ್ಸ್!
ಐಪಿಎಲ್ 2023ರ ಆವೃತ್ತಿಯು ಮಾರ್ಚ್ ತಿಂಗಳಲ್ಲಿ ಆರಂಭವಾಗಿದೆ. ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿರುವ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಆದರೆ, ಅಪಘಾತದಲ್ಲಿ ಗಾಯಗೊಂಡಿರುವ ಪಂತ್ ಐಎಪಿಎಲ್ ಟೂರ್ನಿನಲ್ಲಿ ಆಡುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ಆದ್ದರಿಂದ ಪಂತ್ ಹಿಂದಿರುಗುವ ಬಗ್ಗೆಯೇ ಡೆಲ್ಲಿ ತಂಡ ಚಿಂತೆಗೀಡಾಗಿದೆ. ಜೊತೆಗೆ ಐಪಿಎಲ್‌ನ ಮುಂದಿನ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕ ಯಾರು ಎಂಬ ಪ್ರಶ್ನೆ ಕೂಡ ಉದ್ಭವಗೊಂಡಿದೆ. ಡೆಲ್ಲಿ ನಾಯಕತ್ವದ ಬಗ್ಗೆ ತಿಳಿಯಲು ಎಲ್ಲರೂ ಕಾತರರಾಗಿದ್ದಾರೆ.
ಕೀಪರ್ - ಬ್ಯಾಟ್ಸ್ಮನ್ - ಕ್ಯಾಪ್ಟನ್: ರಿಷಭ್ ಪಂತ್ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಮಾತ್ರವಲ್ಲ, ಆ ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಕೂಡ ಹೌದು. ಆದ್ದರಿಂದಲೇ ಪಂತ್ ತಂಡದಲ್ಲಿ ಇಲ್ಲದಿರುವುದರಿಂದ ಡೆಲ್ಲಿ ತಂಡ ವಿಕೆಟ್ ಕೀಪರ್, ಬ್ಯಾಟ್ಟ್ಮನ್ ಮಾತ್ರವಲ್ಲದೆ ನಾಯಕನಾಗಿಯೂ ಬೇರೆಯವರಿಗೆ ಜವಾಬ್ದಾರಿ ನೀಡಬೇಕಾಗುತ್ತದೆ. ಈ ಬಾರಿ ಚೊಚ್ಚಲ ಐಪಿಎಲ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂತ್ ಗಾಯದ ಸಮಸ್ಯೆಯಿಂದ ಭಾರೀ ಹಿನ್ನಡೆ ಅನುಭವಿಸುವಂತೆ ಆಗಿದೆ.
ಡೆಲ್ಲಿ ನಾಯಕತ್ವ ಯಾರಿಗೆ?: ಐಪಿಎಲ್ ಮುಂದಿನ ಸೀಸನ್ ಮಾರ್ಚ್‌ನಲ್ಲಿ ಪ್ರಾರಂಭವಾಗಿ ಜೂನ್ವರೆಗೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಪಂತ್ ಅನುಪಸ್ಥಿತಿ ಕಾರಣದಿಂದಾಗಿ ಹೊಸ ನಾಯಕನಿಗಾಗಿ ಹುಡುಕಾಟ ನಡೆಸುವುದು ಅನಿರ್ವಾಯವಾಗಿದೆ. ಇದೀಗ ಮುಂದಿನ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಶುಭ ಸುದ್ದಿ.. ಸುಧಾರಿಸುತ್ತಿದೆ ರಿಷಭ್ ಪಂತ್ ಆರೋಗ್ಯ
ಐಪಿಎಲ್‌ನಲ್ಲಿ ಹೈದರಾಬಾದ್‌ಗೆ ನಾಯಕತ್ವ ವಹಿಸಿದ ಅನುಭವ ಕೂಡ ಡೇವಿಡ್ ವಾರ್ನರ್ ಅವರಿಗೆ ಇದೆ. ಇದೇ ವೇಳೆ ಡೆಲ್ಲಿ ನಾಯಕತ್ವಕ್ಕೆ ಕನ್ನಡಿಗ ಮನೀಶ್ ಪಾಂಡೆ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ, ಮನೀಶ್ ಪಾಂಡೆ ಈಗಷ್ಟೇ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿಯೇ ಅವರು ನಾಯಕರಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ₹2.4 ಕೋಟಿಗೆ ಡೆಲ್ಲಿ ಪಾಲಾದ ಮನೀಶ್ ಪಾಂಡೆ; ಮಿನಿ ಹರಾಜಿನಲ್ಲಿ ಆರ್ಸಿಬಿಗೆ ಯಾರೆಲ್ಲಾ?
ಅನುಭವಿ ಕ್ರಿಕೆಟಿಗರಾದ ವಾರ್ನರ್ ಐಪಿಎಲ್‌ನಲ್ಲಿ 162 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ, 42.01ರ ಸರಾಸರಿಯಲ್ಲಿ 5,881 ರನ್ಗಳನ್ನು ಬಾರಿಸಿದ್ದಾರೆ. ತಮ್ಮ 13 ವರ್ಷಗಳ ಐಪಿಎಲ್ ವೃತ್ತಿ ಜೀವನದಲ್ಲಿ 18 ಬಾರಿ ತಂಡ ಆಟಗಾರರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. 2022ರ ಸೀಸನ್‌ನಲ್ಲಿ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ 12 ಪಂದ್ಯಗಳನ್ನು ಆಡಿ, 48.00ರ ಸರಾಸರಿಯಲ್ಲಿ 432 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಸರಣಿಗೂ ಪಂತ್ ಅಲಭ್ಯ?: ಕಾರು ಅಪಘಾತದಲ್ಲಿ ರಿಷಭ್ ಪಂತ್ ಹಣೆ, ಬೆನ್ನು, ಪಾದಕ್ಕೆ ಗಾಯವಾಗಿದ್ದು, ಸದ್ಯ ಉತ್ತರಾಖಂಡದ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಣೆಗೆ ಗಾಯವಾದ ಕಾರಣ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಲಿದ್ದಾರೆ. ಅಲ್ಲದೇ, ಬೆನ್ನು ನೋವಿಗೂ ಶಸ್ತ್ರಚಿಕಿತ್ಸೆ ನಡೆಯಲಿದೆ. ಹೀಗಾಗಿ ದೀರ್ಘಕಾಲ ಪಂತ್ ವಿಶ್ರಾಂತಿ ಪಡೆಯಲಿದ್ದು, ಮುಂದಿನ ತಿಂಗಳು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಟೆಸ್ಟ್ ಸರಣಿಗೂ ಪಂತ್ ಅಲಭ್ಯರಾಗಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಗಾಯಾಳು ರಿಷಬ್ ಪಂತ್ ಔಟ್?: ರೇಸ್ನಲ್ಲಿ ಉಪೇಂದ್ರ, ಭರತ್