ಇನ್ನು ಮುಂದಿನ ನಾಲ್ಕೇ ದಿನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಹೊಸ ಆವೃತ್ತಿಯ ಚುಟುಕು ಕ್ರಿಕೆಟ್ ಆರಂಭವಾಗಲಿದೆ. ಕ್ರಿಕೆಟ್‌ಪ್ರಿಯರಿಗೆ ಒಂದೂವರೆ ತಿಂಗಳು ಮಹಾ ಮನರಂಜನೆ ಸಿಗಲಿದೆ. ಆದರೆ ಈ ಬಾರಿಯ ಐಪಿಎಲ್ಗೆ ಗಾಯದ ಬರೆಯೂ ಬಿದ್ದಿದೆ. ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿದ ಅನೇಕ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಫ್ರಾಂಚೈಸಿಗಳಿಗೆ ತಲೆನೋವಾಗಿದೆ.
ಕಾರು ಅಪಘಾತದಿಂದ ರಿಷಬ್ ಪಂತ್ ಈ ವರ್ಷದ ಕ್ರಿಕೆಟ್ನಿಂದ ಹೊರಗುಳಿದರೆ, ಶ್ರೇಯಸ್ ಅಯ್ಯರ್ ಕೂಡಾ ಗಾಯದಿಂದ ಬಳಲುತ್ತಿದ್ದಾರೆ. ಬೌಲರ್ಗಳಾದ ಪ್ರಸಿದ್ಧ ಕೃಷ್ಣ ಮತ್ತು ಜಸ್ಪಿತ್ ಬೂಮ್ರಾ ಕೂಡಾ ಈ ಆವೃತ್ತಿಯಲ್ಲಿ ಆಡುವುದು ಕಷ್ಟ. ಈಗ ಆರ್ಸಿಬಿಯ ಆರಂಭಿಕ ಬ್ಯಾಟರ್ ರಜತ್ ಪಾಟಿದಾರ್ ಮತ್ತು ಬೌಲರ್ ಜೋಶ್ ಹ್ಯಾಜಲ್‌ವುಡ್ ಕೆಲವು ಪಂದ್ಯಗಳನ್ನು ಆಡುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.
ಹಿಮ್ಮಡಿ ಗಾಯದ ಕಾರಣ ಐಪಿಎಲ್‌ನ ಮೊದಲಾರ್ಧವನ್ನು ರಜತ್ ಪಾಟಿದಾರ್ ಅಡುವುದು ಡೌಟ್. ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇವರು, ಬಾಂಗ್ಲಾದೇಶ ಟೂರ್ ವೇಳೆ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದರು. 29 ವರ್ಷದ ಪಾಟಿದಾರ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಶಿಬಿರದಲ್ಲಿ ತರಬೇತಿಗೆ ಒಳಗಾಗಿದ್ದಾರೆ.
ಅಕಿಲ್ಸ್ ಸ್ನಾಯುರಜ್ಜು ಉರಿಯೂತದಿಂದ ಚೇತರಿಸಿಕೊಳ್ಳುತ್ತಿರುವ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ. ಪಂದ್ಯಾರಂಭಕ್ಕೂ ಮುನ್ನವೇ ಈ ಇಬ್ಬರು ತಂಡದಿಂದ ಹೊರಗುಳಿದಿರುವುದು ಫಾಫ್ ಡು ಪ್ಲೆಸಿಸ್ಗೆ ಹೊರೆಯಾಗಲಿದೆ. ಈ ನಡುವೆ ಕೆಲ ಪಂದ್ಯಗಳನ್ನು ಮ್ಯಾಕ್ಸ್‌ವೆಲ್ ಸಹ ಆಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಆರ್ಸಿಬಿ ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್ಮರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್.
ಜಾನಿ ಬೈರ್‌ಸ್ಟೋ ಬದಲಿಗೆ ಮ್ಯಾಥ್ಯೂ ಶಾರ್ಟ್: ಆಂಗ್ಲ ಕ್ರಿಕೆಟಿಗ ಜಾನಿ ಬೈರ್‌ಸ್ಟೋ 2023ರ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಈ ಐಪಿಎಲ್ ಋತುವಿನಲ್ಲಿ ಅವರು ಪಂಜಾಬ್ ಕಿಂಗ್ಸ್ ಪರ ಆಡಲು ಸಾಧ್ಯವಾಗುವುದಿಲ್ಲ. ಕಳೆದ ವರ್ಷ ಸೆಪ್ಟೆಂಬರ್ 2022 ರಲ್ಲಿ, ಜಾನಿ ತನ್ನ ಎಡಗಾಲಿಗೆ ಗಂಭೀರವಾದ ಗಾಯವಾಗಿತ್ತು. ಗಾಯದಿಂದ ಜಾನಿ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಪಂಜಾಬ್ ಕಿಂಗ್ಸ್‌ನಲ್ಲಿ ಜಾನಿ ಬದಲಿಗೆ ಆಸ್ಟ್ರೇಲಿಯಾದ ಬ್ಯಾಟರ್ ಮ್ಯಾಥ್ಯೂ ಶಾರ್ಟ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಪಂಜಾಬ್ ಕಿಂಗ್ಸ್ ಬಿಸಿಸಿಐ ಮೂಲಕ ಜಾನಿ ಬೈರ್‌ಸ್ಟೋವ್ ಅವರ ಫಿಟ್‌ನೆಸ್ ಅಪ್‌ಡೇಟ್‌ಗಾಗಿ ಕಾಯುತ್ತಿತ್ತು. ಆದರೆ ಬೈರ್‌ಸ್ಟೋ ಬದಲಿಗೆ ಮತ್ತೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಆಂಗ್ಲ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ತಿಳಿಸಿದೆ. ಮೇ ತಿಂಗಳಲ್ಲಿ ನಡೆಯಲಿರುವ ಡಿವಿಷನ್ 2ರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಬೈರ್‌ಸ್ಟೋವ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ: ತಂಡ ಸೇರಿದ ದಿಗ್ಗಜರು: ನಾಳೆ ಗೇಲ್, ಎಬಿಡಿಗೆ ಹಾಲ್ ಆಫ್ ಫೇಮ್ ಗೌರವ