ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ರನ್ಗಳ ಬರ ನೀಗಿಸಿಕೊಂಡಿದ್ದಾರೆ. ಪ್ರಸ್ತುತ ಆವೃತ್ತಿಯಲ್ಲೂ ಇದೇ ಮೊದಲ ಅರ್ಧಶತಕ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ 2021, ಸೆಪ್ಟೆಂಬರ್ 26ರಂದು ಆರ್ಸಿಬಿಯ 11ನೇ ಪಂದ್ಯದಲ್ಲಿ ವಿರಾಟ್ ಮುಂಬೈ ಇಂಡಿಯನ್ಸ್ ವಿರುದ್ಧ 51 ರನ್ಗಳಿಸಿದ್ದರು. ಅದಾದ ನಂತರ ಸತತ 14 ಇನ್ನಿಂಗ್ಸ್ಗಳಲ್ಲಿ ಕೊಹ್ಲಿ ಅರ್ಧಶತಕದ ಗಡಿ ದಾಟಿರಲಿಲ್ಲ. ಈ ಆವೃತ್ತಿಯಲ್ಲಿ ಅವರು ಕಳೆದ 9 ಪಂದ್ಯಗಳಲ್ಲಿ ಕ್ರಮವಾಗಿ 41*,12, 5, 48,1,12,0,0, 9 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಕಳೆದ ಪಂದ್ಯದಿಂದ ಆರಂಭಿಕರಾಗಿ ಕಣಕ್ಕಿಳಿದಿದ್ದ ಅವರು ಇಂದು ಗುಜರಾತ್ ವಿರುದ್ಧ ಕೊನೆಗೂ ಅರ್ಧಶತಕ ಸಿಡಿಸುವಲ್ಲಿ ಸಫಲರಾದರು.
ಆದರೆ ಈ ಅರ್ಧಶತಕಕ್ಕಾಗಿ ಅವರು ಬರೋಬ್ಬರಿ 45 ಎಸೆತಗಳನ್ನು ತೆಗೆದುಕೊಂಡರು. ಇವರ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸೇರಿದೆ. ವಿರಾಟ್ ಕೊಹ್ಲಿ 217ನೇ ಪಂದ್ಯವನ್ನಾಡುತ್ತಿದ್ದು, ಇದು ಅವರ 43 ನೇ ಅರ್ಧಶತಕವಾಗಿದೆ. ಒಟ್ಟಾರೆ ಅವರು 5 ಶತಕಗಳ ಸಹಿತ 6467 ರನ್ಗಳಿಸಿದ್ದಾರೆ.
ಇದನ್ನೂ ಓದಿ: ಡ್ರೀಮ್ ಫಾರ್ಮ್ ಚೇತೇಶ್ವರ್.. ಕೌಂಟಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಪೂಜಾರ