ಮುಂಬೈ: 15ನೇ ಆವೃತ್ತಿಯ ಐಪಿಎಲ್‌ನ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಸೋಲು ಕಂಡಿದೆ. ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಆರ್‌ಆರ್ ತಂಡದಲ್ಲಿ ಬೌಲರ್‌ಗಳ ಮಾರಕ ದಾಳಿಗೆ ಎಸ್‌ಆರ್‌ಹೆಚ್ ತಬ್ಬಿಬ್ಬಾಯಿತು. ಇದರಿಂದಾಗಿ 61 ರನ್‌ಗಳ ಸೋಲು ಕಾಣಬೇಕಾಯಿತು.
ಸಂಜು ಪಡೆ ನೀಡಿದ 211 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಕೇನ್ ವಿಲಿಯಮ್ಸನ್ ಅಂಡ್ ಟೀಂ 7 ವಿಕೆಟ್ ನಷ್ಟಕ್ಕೆ 149 ರನ್‌ಗಳಷ್ಟೇ ಗಳಿಸಲು ಶಕ್ತವಾಯಿತು. ಹೈದರಾಬಾದ್ ಬ್ಯಾಟರ್ ಮಾರ್ಕಾರಾಮ್ 41 ಎಸೆತಗಳನ್ನು 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 57 ರನ್ ಗಳಿಸಿ ಕೊನೆಯ ವರೆಗೆ ಹೋರಾಟ ನಡೆಸಿದರು. ಸುಂದರ್ ಹೊರತು ಪಡಿಸಿ ಈತನಿಗೆ ಸಾಥ್ ನೀಡುವಲ್ಲಿ ಇತರ ಯಾವೊಬ್ಬ ಬ್ಯಾಟರ್ ಕೂಡ ಯಶಸ್ವಿಯಾಗಲಿಲ್ಲ.
ಮಿಂಚಿದ ಸುಂದರ್: ವಾಷಿಂಗ್ಟನ್ ಸುಂದರ್ ಕೇವಲ 14 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸೇರಿ 40 ರನ್ ಗಳಿಸಿ ಗಮನ ಸೆಳೆದರು. ರೊಮಾರಿಯೋ ಶೆಫರ್ಡ್ 24 ರನ್ ಗಳಿಸಿದರು. ಒಟ್ಟಾರೆಯಾಗಿ ಎಸ್‌ಆರ್‌ಹೆಚ್ ಪರ ಬ್ಯಾಟರ್ ಹಾಗೂ ಬೌಲರ್‌ಗಳು ಪಂದ್ಯ ಗೆಲ್ಲಲು ವಿಫಲವಾದರು. ರಾಯಲ್ಸ್ ಪರ ಚಾಹಲ್ 3 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ, ಬೌಲ್ಟ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್‌ಗೆ ನಾಯಕ ಸಂಜು ಸ್ಯಾಮ್ಸನ್ ತನ್ನ ಬ್ಯಾಟ್ ಮೂಲಕ ರನ್ ಹರಿಸಿದರು. ಕೇವಲ 27 ಎಸೆತಗಳಲ್ಲಿ 3 ಬೌಂಡರಿ 5 ಭರ್ಜರಿ ಸಿಕ್ಸರ್‌ಗಳೊಂದಿಗೆ 55 ರನ್ ಸಿಡಿಸಿದರು. ಕನ್ನಡಿಗ ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 41 ರನ್, ಹೆಟ್ಮೆಯರ್ 13 ಎಸೆತಗಳಲ್ಲಿ 32 ರನ್‌ಗಳ ಸ್ಫೋಟಕ ಆಟವಾಡಿದ್ರು. ಆರಂಭಿಕರಾದ ಬಟ್ಲರ್ 35, ಜೈಸ್ವಾಲ್ 20 ರನ್ ಗಳಿಸಿದರು. ಆರ್ ಆರ್ ನಿಗದಿತ 20 ಓವರ್‌ಗಳಲ್ಲಿ 210 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಉಮ್ರಾನ್ ಮಲಿಕ್, ನಟರಾಜನ್ ತಲಾ 2 ವಿಕೆಟ್ ಪಡೆದರೆ, ಭುವನೇಶ್ವರ್, ಶೆಫರ್ಡ್ ತಲಾ 1 ವಿಕೆಟ್ ಗಳಿಸಿದರು.
ಇದನ್ನೂ ಓದಿ: ಮ್ಸನ್ ಆಕರ್ಷಕ ಫಿಫ್ಟಿ, ಪಡಿಕ್ಕಲ್,ಹೆಟ್ಮಾಯರ್ ಸ್ಫೋಟಕ ಬ್ಯಾಟಿಂಗ್.. ಸನ್ರೈಸರ್ಸ್ ಗೆಲುವಿಗೆ 211 ರನ್ ಗುರಿ